ಜಿಲ್ಲೆ

ಜಿಲ್ಲೆಯಲ್ಲಿ 22 ರಫ್ತು ಆಧಾರಿತ ಘಟಕಗಳ ಕಾರ್ಯನಿರ್ವಹಣೆ

ಗೋಪಾಲಕೃಷ್ಣ ಪಾದೂರ್

 ಉಡುಪಿ: ಜಿಲ್ಲೆಯಲ್ಲಿ 22 ರಫ್ತು ಆಧಾರಿತ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ವಿದೇಶಿ ರಫ್ತನ್ನು ಉತ್ತೇಜಿಸುವುದರೊಂದಿಗೆ ಇನ್ನಷ್ಟು ಹೆಚ್ಚಿಸಬೇಕು. ಕೈಗಾರಿಕಾ ಪ್ರದೇಶಗಳ ವಿಸ್ತೀರ್ಣಕ್ಕೆ ಗುರುತಿಸಲಾಗಿರುವ ಜಮೀನಿನ ಭೂ ಸ್ವಾಧಿನ ಪ್ರಕ್ರಿಯೆ ತ್ವರಿತಗೊಳಿಸಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ರಫ್ತು ಉತ್ತೇಜನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೊಸ ಕೈಗಾರಿಕಾ ಪ್ರದೇಶಗಳ ನಿಮಾರ್ಣಕ್ಕೆ ವಿವಿಧ ತಾಲೂಕುಗಳಲ್ಲಿ ಭೂಮಿ ಗುರುತಿಸಲಾಗಿದೆ. ಕೆ.ಐ.ಎ.ಡಿ.ಬಿ. ಅಧಿಕಾರಿಗಳು ಈ ಪ್ರದೇಶಗಳನ್ನು ಸ್ವಾಧಿನಪಡಿಸಿಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ, ವಿದ್ಯುಚ್ಛಕ್ತಿ ಸೌಕರ್ಯ, ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿ, ಹೊಸ ಕೈಗಾರಿಕೆಗಳು ಸ್ಥಾಪನೆಗೊಂಡು ಜನರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದರು.

ಜಿಲ್ಲೆಯ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅನುಮತಿ ಪಡೆಯದೇ ಹಾಗೂ ಜಾಗಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿ ನೀಡದೆ ಆರ್​.ಎಂ.ಸಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಮಾಲೀಕರಿಗೆ ನೋಟಿಸ್​ ನೀಡಬೇಕು. ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳಿಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದರು.

ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂ ಸ್ವಾಧಿನ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಸಂಪರ್ಕ ರಸ್ತೆ ನಿಮಾರ್ಣಕ್ಕೆ ಮುಂದಾಗಬೇಕು. ಮಿಯ್ಯಾರು ಕೈಗಾರಿಕಾ ಪ್ರದೇಶಗಳಲ್ಲಿ ಪ್ರತಿಯೊಂದು ಕೈಗಾರಿಕಾ ಘಟಕಗಳೂ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಸ್ಥಳಿಯವಾಗಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.

ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್​ ವಿ. ನಾಯಕ್​, ಕೆ.ಐ.ಎ.ಡಿ.ಬಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್​ ಕುಂದರ್​, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್​ ಬಿ, ಶಿವಮೊಗ್ಗ ಕೆ.ಎಸ್​.ಎಸ್​.ಐ.ಡಿ.ಸಿ ಅಸಿಸ್ಟೆಂಟ್​ ಜನರಲ್​ ಮ್ಯಾನೆಜರ್​ ನಾಗಾಭರಣ ಕೆ.ಪಿ, ಉಪಸ್ಥಿತರಿದ್ದರು.

ಬಾಕ್ಸ್​...

ಪರಿಸರ ಸೂಕ್ಷ$್ಮ ಪ್ರದೇಶ ಪರಿಶೀಲನೆ

ಹೊಸ ಕೈಗಾರಿಕಾ ಪ್ರದೇಶ ನಿಮಾರ್ಣಕ್ಕೆ ಈಗಾಗಲೇ ಹೆಬ್ರಿ ತಾಲೂಕಿನ ಕೆರೆಬೆಟ್ಟು ಗ್ರಾಮದಲ್ಲಿ 31.28 ಎಕ್ರೆ ಹಾಗೂ ಶಿವಪುರ ಗ್ರಾಮದಲ್ಲಿ 45.75 ಎಕ್ರೆ ಜಮೀನು ಸೇರಿದಂತೆ ಒಟ್ಟು 77.03 ಎಕ್ರೆ ಜಾಗವನ್ನು ಖಾಸಗಿ ಭೂ ಮಾಲೀಕರಿಗೆ ಪೂರ್ಣ ಪರಿಹಾರಧನವನ್ನು ಪಾವತಿಸಿ, ನಿಯಮಾನುಸಾರ ಸ್ವಾಧಿನಪಡಿಸಿಕೊಳ್ಳಲಾಗಿದೆ. ಆದರೆ 36.56 ಎಕ್ರೆ ಸರ್ಕಾರಿ ಜಮೀನು ಮಂಜೂರಾತಿ ಪ್ರಕ್ರಿಯೆ ಬಾಕಿ ಇದೆ. ಈ ಜಾಗ ಪರಿಸರ ಸೂಕ್ಷ$್ಮ ಪ್ರದೇಶದಲ್ಲಿ ಬರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಬೇಕು.

ಡಾ.ಕೆ. ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ