ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿರುವ ಹೋಟೆಲ್, ಕ್ಯಾಂಟೀನ್ ಸೇರಿ ಆಹಾರ ಪದಾರ್ಥ ಮಾರಾಟ ಕೇಂದ್ರಗಳಿಗೆ ನಿಗದಿತವಾಗಿ ಭೇಟಿ ನೀಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲಿಸಬೇಕು ಎಂದು ಆಹಾರ ಸುರಕ್ಷತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚಿಸಿದರು.
ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸೇವನೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ವಿದ್ಯಾರ್ಥಿನಿಲಯಗಳಿಗೆ, ಶಾಲೆಗಳಿಗೆ, ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿ ತಯಾರಿಸುವ ಆಹಾರದ ಬಗ್ಗೆ ಪರಿಶೀಲನೆ ಮಾಡಬೇಕು. ಹಬ್ಬ, ಉತ್ಸವದಂಥ ಸಂದರ್ಭದಲ್ಲಿ ಸಾಮೂಹಿಕವಾಗಿ ಪ್ರಸಾದ ತಯಾರಿಕೆ ನಡೆಯುತ್ತದೆ. ಅಂಥ ಕಡೆಗಳಲ್ಲಿ ಆಹಾರ ಗುಣಮಟ್ಟ ಖಾತರಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಆಹಾರ ಉದ್ದಿಮೆದಾರರು ಆಹಾರ ನೋಂದಣಿ ಮಾಡಿಸಿಕೊಳ್ಳಬೇಕು ಅಥವಾ ಆಹಾರ ಪರವಾನಗಿ ಪಡೆಯುವುದು ಕಡ್ಡಾಯ ಎಂದರು.
ದಾಳಿ ನಡೆಸಿ:
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಪರವಾನಗಿ ಪಡೆಯದೆ ನಡೆಸುವ ಆಹಾರ ಉದ್ದಿಮೆಗಳ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕಾರ್ಯಕ್ಕೆ ಮೀನಮೇಷ ಬೇಡ ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಆಹಾರ ಉದ್ದಿಮೆ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಪರಿಶೀಲನೆ ಮಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಿ, ನಿಯಮಿತವಾಗಿ ಸಂಶಯಾಸ್ಪದ ಆಹಾರ ಮಾದರಿ ಸಂಗ್ರಹಿಸಿ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು. ಆಹಾರ ಸೇವನೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸುವ ಜತೆಗೆ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ 5,548 ನೋಂದಣಿ ಹಾಗೂ 1,505 ಪರವಾನಗಿ ಪಡೆದ ಆಹಾರ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿವೆ. ಇಂಥ ಉದ್ದಿಮೆಗಳಿಗೆ ಆಗಾಗ ಅಧಿಕಾರಿಗಳು ಭೇಟಿ ನೀಡಿ ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಧರ್ಮೇಂದ್ರ ಸಭೆಗೆ ಮಾಹಿತಿ ನೀಡಿದರು.
ದೂರು ನೀಡಿ:
ಜಿಲ್ಲೆ ವ್ಯಾಪ್ತಿಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದಾದರು ಸಮಸ್ಯೆ ಕಂಡುಬಂದಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಧರ್ಮೇಂದ್ರ ಮೊಬೈಲ್ ಸಂಖ್ಯೆ 9901961771, ಹೋಸಕೋಟೆ ತಾಲೂಕು ಆಹಾರ ಸುರಕ್ಷತೆ ಅಧಿಕಾರಿ ಗೋವಿಂದರಾಜು 9845511663, ದೊಡ್ಡಬಳ್ಳಾಪುರ ತಾಲೂಕು ಆಹಾರ ಸುರಕ್ಷತ ಅಧಿಕಾರಿ ನಾಗೇಶ್ 9731837210, ದೇವನಹಳ್ಳಿ ತಾಲೂಕು ಆಹಾರ ಸುರಕ್ಷತ ಅಧಿಕಾರಿ ಪ್ರವೀಣ್ 8884393910, ನೆಲಮಂಗಲ ತಾಲೂಕು ಆಹಾರ ಸುರಕ್ಷತ ಅಧಿಕಾರಿ ರವಿಕುಮಾರ್ 9845580486 ಅವರನ್ನು ಸಂಪರ್ಕಿಸಿ ದೂರು ನೀಡಬಹುದು.