dc meeting 
ಜಿಲ್ಲೆ

ಬೇಡಿಕೆ ಈಡೇರಿಕೆಗೆ ರೈತ ಸಂಘಟನೆಗಳ ಪಟ್ಟು

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕೈಗಾರಿಕೆಗಳಿಗೆ ಭೂಸ್ವಾಧೀನಪಡಿಸಿಕೊಂಡಿರುವ ರೈತ ಕುಟುಂಬಕ್ಕೆ ಕೈಗಾರಿಕೆಗಳಲ್ಲಿ ಉದ್ಯೋಗ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು. ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ರೈತ ಸಂಘಟನೆಗಳ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಅಕ್ರಮಗಣಿಗಾರಿಕೆ ತಡೆಯಬೇಕು. ರೈತರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಪ್ರತಿ ತಿಂಗಳು ತಾಲೂಕುಮಟ್ಟದಲ್ಲಿ ಸಭೆ ನಡೆಸಬೇಕು. ಅರ್ಜಿ ನಮೂನೆ 53 ಮತ್ತು 57 ರಡಿ ಸಲ್ಲಿಸಿರುವ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು, ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರ ಸಾಲ ಹೆಚ್ಚಿಸಬೇಕು, ಕೆರೆ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸುವುದು, ಸರ್ಕಾರಿ ಆಸ್ಪತ್ರೆಗಳಲ್ಲಿ ಭೂತ ಸೌಕರ್ಯಗಳ ಕೊರತೆ ನೀಗಿಸುವ ಕಡೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಗೋಮಾಳಗಳಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳಿಗೆ ಪೋಡಿ ಮಾಡಿಕೊಡಬೇಕು ಹಾಗೂ ಪ್ರತಿ ಗ್ರಾಮಗಳಲ್ಲಿ ಸ್ಮಶಾನ ಜಾಗವನ್ನು ಕಾಯ್ದಿರಿಸಿ ತಡೆಗೋಡೆ ನಿರ್ಮಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ ಸಭೆಯ ಗಮನಕ್ಕೆ ತಂದರು.
ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಪ್ರಕರಣಗಳನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ವಿಚಾರಣೆ ನಡೆಸುವುದು, ರೈತರ ಜಮೀನು ಪ್ರಕರಣಗಳಿಗೆ ಪ್ರತ್ಯೇಕ ನ್ಯಾಯಾಧೀಶರನ್ನು ನೇಮಿಸುವುದು, ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಶೀಘ್ರ ಪರಿಹಾರ ಒದಗಿಸದಿರುವುದು ಸೇರಿ ವಿವಿಧ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಮುಂದಿಟ್ಟರು.
ಕೈಗಾರಿಕಾಭಿವೃದ್ಧಿ ಮಂಡಳಿ ವಿಶೇಷ ಭೂಸ್ವಾಧೀನಾಧಿಕಾರಿ ಶಿವಕುಮಾರ್, ಗಣಿಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಪುಷ್ಪಾ, ಡಿಡಿಎಲ್ ಆರ್. ಸಂತೋಷ್, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಅರುಂಧತಿ, ಇಒ ಎಲ್. ಮಧು, ವಿಶೇಷ ತಹಸೀಲ್ದಾರ್ ಭಾಗ್ಯಾ, ಶಿರಸ್ತೇದಾರ್ ರವೀಂದ್ರ, ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಕಾರ್ಯದರ್ಶಿ ಸುರೇಶ್ ಮಳೆಕತ್ತಿಗನೂರು, ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಕಾರ್ಯದರ್ಶಿ ಸುರೇಶ್ ಮಳೆಕತ್ತಿಗನೂರು, ಜಿಲ್ಲಾಕಾರ್ಯದರ್ಶಿ ನಾಗೇಶ್, ಪ್ರಾಂತಕಾರ್ಯದರ್ಶಿ ಜಯರಾಮಯ್ಯ, ರಾಜ್ಯರೈತ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ರಾಜೇಶ್ ಉಪಾಧ್ಯಕ್ಷ ಜಗದೀಶ್ ಮತ್ತಿತರರು ಇದ್ದರು.

ಜಿಲ್ಲಾಧಿಕಾರಿ ಭರವಸೆ
ಈಗಾಗಲೇ ಆಂದೋಲನದ ರೀತಿ ಕೆರೆ ಒತ್ತುವರಿ ತೆರವು ಮಾಡಲಾಗುತ್ತಿದೆ. ನಿಯಮಾನುಸಾರ ಭೂಸ್ವಾಧೀನ ಪಡಿಸಿಕೊಂಡ ರೈತರ ಕುಟುಂಬದವರ ವಿದ್ಯಾರ್ಹತೆ ಆಧಾರದ ಮೇಲೆ ಉದ್ಯೋಗ ನೀಡಬೇಕಿದ್ದು ಕೂಡಲೇ ಕೈಗಾರಿಕೆಗಳೊಂದಿಗೆ ಸಭೆ ಮಾಡಿ ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಭರವಸೆ ನೀಡಿದರು. ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಗಣಿಗಾರಿಕೆ ತಡೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಿಯಾಮಾನುಸಾರ ದಾಖಲೆಗಳ ಪರಿಶೀಲಿಸಿ ರೈತರಿಗೆ ಪೋಡಿ ಮಾಡಿಕೊಡುವುದು, ಈಗಾಗಲೇ ಪ್ರತಿ ಗ್ರಾಮಗಳಲ್ಲಿ ಗುರುತಿಸಿರುವ ಸಶ್ಮಾನ ರಸ್ತೆ ವ್ಯವಸ್ಥೆ ಮಾಡಿಕೊಡುವುದು, ಸೂಕ್ತವಲ್ಲದ ಜಾಗಗಳಿದ್ದಲ್ಲಿ ಬದಲಿ ಜಾಗ ಗುರುತಿಸಿಕೊಡುವುದು, ಭೂಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಜಮೀನು ದಾಖಲೆಗಳ ಸರಳೀಕರಿಸಿ ಶೀಘ್ರ ಪರಿಹಾರ ಒದಗಿಸುವುದಾಗಿ ಸಭೆಯಲ್ಲಿ ಭರವಸೆ ನೀಡಿದರು.