ತುಮಕೂರು : ಜಿಲ್ಲಾದ್ಯಂತ ಮಾ.21 ರಿಂದ 27ರವರೆಗೆ ಆರೋಗ್ಯವಂತ ಮಗು ಸ್ಪರ್ಧೆ (ಸ್ವಸ್ಥ ಬಾಲಕ, ಬಾಲಕಿ ಸ್ಪರ್ಧೆ) ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈ ಅಭಿಯಾನದಲ್ಲಿ ಆರೋಗ್ಯವಂತ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅವರ ಆರೋಗ್ಯ ಮತ್ತು ಪೋಷಣೆ ಬಗ್ಗೆ ಸಮುದಾಯವನ್ನು ಜಾಗೃತಗೊಳಿಸಬೇಕು. ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಾಲಕರು ಮತ್ತು ಮಕ್ಕಳನ್ನು ಉತ್ತೇಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾ.21 ರಿಂದ 27ರ ವರೆಗೆ ಸ್ವಸ್ಥ ಬಾಲಕ, ಬಾಲಕಿ ಸ್ಪರ್ಧೆಯನ್ನು ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ ವರದಿ ಸಲ್ಲಿಸಬೇಕು ಎಂದರು.
ಅಂಗನವಾಡಿ ಕೇಂದ್ರಗಳಿಗೆ ದಾಖಲಾಗಿರುವ ಹಾಗೂ ದಾಖಲಾಗದೆ ಹೊರಗುಳಿದ 0-6 ವರ್ಷದ ಮಕ್ಕಳ ತೂಕ ಮತ್ತು ಎತ್ತರವನ್ನು ಅಳತೆ ಮಾಡಿ, ಆ ಮಾಹಿತಿಯನ್ನು ಪ್ರತಿದಿನವೂ ಪೋಷಣ್ ಟ್ರ್ಯಾಕರ್ ಡ್ಯಾಶ್‌ಬೋರ್ಡ್‌ಗೆ ಅಳವಡಿಸಬೇಕು ಎಂದು ನಿರ್ದೇಶಿಸಿದರು.
ಎಎನ್‌ಎಂಗಳನ್ನು ನಿಯೋಜಿಸಿ: ಅಭಿಯಾನದ ಯಶಸ್ಸಿಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ಹಾಗೂ ಅಂಗನವಾಡಿಯಿಂದ ಹೊರಗಳಿದ ಪ್ರದೇಶದ ಮಕ್ಕಳನ್ನು ನೋಂದಣಿ ಮಾಡಿಸಲು ಆರೋಗ್ಯ ಕಾರ್ಯಕರ್ತೆ, ಎಎನ್‌ಎಂಗಳನ್ನು ನಿಯೋಜಿಸಬೇಕು. ಶಿಬಿರಗಳನ್ನು ಏರ್ಪಡಿಸುವ ಮೂಲಕ ಮಕ್ಕಳ ಬೆಳವಣಿಗೆ ಕಾರ್ಯಕ್ರಮ ನಡೆಸಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಕೇಶವರಾಜ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ನಗರ ವ್ಯಾಪ್ತಿಯ ಅಂಗನವಾಡಿಗಳಿಂದ ಹೊರಗುಳಿದ ಮಕ್ಕಳು ಅಭಿಯಾನದಲ್ಲಿ ಭಾಗವಹಿಸುವಂತೆ ಶಿಬಿರ ಆಯೋಜಿಸಿ ಅರಿವು ಮೂಡಿಸಬೇಕು. ಇದಕ್ಕೆ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಕಾರ ಪಡೆದುಕೊಳ್ಳುವಂತೆ ಪಾಲಿಕೆ ಅಧಿಕಾರಿ ಡಾ.ರಕ್ಷಿತ್ ಅವರು ನಿರ್ದೇಶಿಸಿದರು.
ಸರ್ಕಾರಿ, ಅನುದಾನಿತ, ಅನುದಾನರಹಿತ, ಶಾಲಾ ಪೂರ್ವ ಶಿಕ್ಷಣ ನಡೆಸುವ ಸಂಸ್ಥೆಗಳು 6 ವರ್ಷದೊಳಗಿನ ಮಕ್ಕಳ ಎತ್ತರ, ತೂಕ, ವಯಸ್ಸು ಜನ್ಮದಿನಾಂಕ ಪೋಷಣ್ ಟ್ರ್ಯಾಕರ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು. 0-6 ಮಕ್ಕಳ ಬೆಳವಣಿಗೆ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಅಳವಡಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತಿತರರು ಇದ್ದರು.
17 ಸಾವಿರ ಮಕ್ಕಳು ಅಂಗನವಾಡಿಯಿಂದ ದೂರ: ಜಿಲ್ಲೆಯಲ್ಲಿ 0-6 ವಯೋಮಾನದ 1,60,781 ಮಕ್ಕಳಿದ್ದಾರೆ. ಇವರಲ್ಲಿ 1,42,993 ಮಕ್ಕಳು ಅಂಗನವಾಡಿಗೆ ದಾಖಲಾಗಿದ್ದಾರೆ. 17,788 ಮಕ್ಕಳು ಕೇಂದ್ರದಿಂದ ಹೊರಗುಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ೆಬ್ರವರಿಯಲ್ಲಿ ಅಪೌಷ್ಟಿಕ ಮಕ್ಕಳ ಮಾಸಿಕ ವರದಿಯನ್ವಯ ವಯಸ್ಸಿಗೆ ಅನುಗುಣವಾಗಿ ಇರಬೇಕಾದ ಎತ್ತರಕ್ಕಿಂತ 503 ಮಕ್ಕಳ ಎತ್ತರ ತುಂಬಾ ಕಡಿಮೆ ಇದೆ. ಎತ್ತರಕ್ಕೆ ತಕ್ಕಂತೆ ತೂಕವಿಲ್ಲದ 95 ಮಕ್ಕಳು ಇರುವುದಾಗಿ ತಿಳಿಸಿದರು.