ಕೋಲಾರ: ವಿವಿಧ ಇಲಾಖೆಗಳ ಯೋಜನೆಯಡಿ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಸಿಗದಿರುವ ಪ್ರಕರಣಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಡಿಸಿ ಡಾ. ಆರ್.ಸೆಲ್ವಮಣಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ, ಉಸ್ತುವಾರಿ ಸಮಿತಿ ಸಭೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಫಲಾನುಭವಿಗಳು ಇಲಾಖೆಗಳಲ್ಲಿನ ವಿವಿಧ ಯೋಜನೆಯಡಿ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರೂ ಬ್ಯಾಂಕ್‌ಗಳು ಮಂಜೂರಾತಿಗೆ ನಿರಾಕರಿಸುತ್ತಿರುವ ಬಗ್ಗೆ ಸಮಿತಿ ಸದಸ್ಯರ ದೂರಿಗೆ ಸ್ಪಂದಿಸಿದ ಅವರು, ಫಲಾನುಭವಿಗಳು ಅರ್ಹರಾಗಿದ್ದಲ್ಲಿ ಸಾಲ ಮಂಜೂರಾತಿ ನಿರಾಕರಿಸುವಂತಿಲ್ಲ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.
ವಿವಿಧ ಇಲಾಖೆಗಳಲ್ಲಿ ದಾಖಲೆಗಳು ನಾಪತ್ತೆಯಾಗಿರುವ ದೂರು ಬಂದಿದ್ದು, ಕೂಡಲೆ ಎಲ್ಲ ದಾಖಲೆಗಳನ್ನು ಇಲಾಖೆಯವರು ಸ್ಕ್ಯಾನ್ ಮಾಡಿಸಿ ಡಿಸಿ ಕಚೇರಿಗೂ ಒಂದು ಪ್ರತಿ ಕಳುಹಿಸಬೇಕು. ಬಾಕಿಯಿರುವ ರೈತರ ಜಮೀನುಗಳ ಪಿ ನಂಬರ್ ತೆಗೆಯುವ ಕಾರ್ಯ ಶೀಘ್ರ ಮುಗಿಸಬೇಕು. ಕೆಐಡಿಬಿಗೆ ಸಂಬಂಧಿಸಿದಂತೆ ಜಿಲ್ಲೆಯವರು ಬೆಂಗಳೂರು ಸೇರಿ ಮತ್ತಿತರ ಕಡೆ ನಿವೇಶನ ಹೊಂದಿದ್ದರೆ ಅಂತಹವರನ್ನು ಗುರುತಿಸಿ ಇಲ್ಲಿನ ಸೌಲಭ್ಯ ತಡೆಯಬೇಕು. ನಗರದ ವಾಲ್ಮೀಕಿ ಭವನದ ಸಮಸ್ಯೆ ಬಗೆಹರಿಸಿ ಶೀಘ್ರ ಲೋಕಾರ್ಪಣೆಗೆ ಕ್ರಮ ವಹಿಸಲಾಗುವುದು ಎಂದರು.
ಭವನಗಳ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದ್ದರೆ ಆ.15ರೊಳಗೆ ಪಟ್ಟಿ ನೀಡಿ, ಕೃಷಿ ಹೊಂಡಕ್ಕೆ ಫೆನ್ಸಿಂಗ್ ನಿರ್ಮಿಸಿಕೊಳ್ಳದ ರೈತರಿಗೆ ನೋಟಿಸ್ ನೀಡಿ ಅರಿವು ಮೂಡಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು. ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಕೆ ಸಂಬಂಧ ಪ್ರತಿ ತಿಂಗಳ ಮೊದಲ ಹಾಗೂ ಕಡೇ ಶನಿವಾರ ಸಭೆ ನಡೆಸುವುದಾಗಿ ತಿಳಿಸಿದರು.
ಸಮಿತಿ ಸದಸ್ಯ ಅಂಬರೀಷ್ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ ಸರಿಯಾಗಿ ಬೋರ್‌ವೆಲ್ ನೀಡುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯದ ಅರ್ಜಿ ಸಲ್ಲಿಸಿದರೆ ವಿಳಂಭ ಧೋರಣೆ ಅನುಸರಿಸುತ್ತಿದ್ದಾರೆ, ಕ್ರಮಕೈಗೊಂಡು ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಕೆಐಡಿಬಿಯಿಂದ ಕೈಗಾರಿಕೆ ಸೌಲಭ್ಯಗಳು ಬೆಂಗಳೂರಿನ ಉದ್ಯಮಿಗಳ ಪಾಲಾಗಿ ಒಂದೇ ಕುಟುಂಬದ ನಾಲ್ವರು ಸೌಲಭ್ಯ ಪಡೆದಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕು. ಹೋಬಳಿಗಳಲ್ಲಿ ಅಂಬೇಡ್ಕರ್, ವಾಲ್ಮೀಕಿ, ಬಾಬು ಜಗಜೀವನ್‌ರಾಂ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಲು ಸಿದ್ಧವಿದ್ದರೂ ಜಾಗ ಕಲ್ಪಿಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಅಬಕಾರಿ-ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸದಸ್ಯ ನಾಗನಾಳ ಮುನಿಯಪ್ಪ ಮಾತನಾಡಿ, ಸುಗಟೂರು ಮತ್ತು ವೇಮಗಲ್‌ನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುತ್ತಿಲ್ಲ, ಕಾರ್ಮಿಕ ಇಲಾಖೆಯ ಆಹಾರದ ಕಿಟ್ ಗಾರೆ ಕೆಲಸದವರಿಗೆ ಸಿಕ್ಕಿಲ್ಲ ಎಂದು ದೂರಿದರು.
ಮಾಲೂರು ವೆಂಕಟ್ರಾಮ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ನೇಮಕಗೊಂಡಿರುವ ಗುತ್ತಿಗೆ ನೌಕರರು ಭೂ ದಾಖಲೆ ವಿಭಾಗದಲ್ಲಿ ಸಾಕಷ್ಟು ಅಕ್ರಮ ನಡೆಸುತ್ತಿದ್ದು, ಮಾಲೂರಿನಲ್ಲಿ ಹೆಚ್ಚು ನಡೀತಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದರೆ, ಮುಳಬಾಗಿಲಿನ ಆವಣಿಯಲ್ಲಿ ಹಾಸ್ಟೆಲ್ ಕಾಮಗಾರಿ ಪೂರ್ಣಗೊಳಿಸುವಂತೆ ಸದಸ್ಯ ಎಂ.ಜಿ.ವೆಂಕಟೇಶ್ ಮನವಿ ಮಾಡಿದರು.
ಜಿಪಂ ಸಿಇಒ ನಾಗರಾಜ್, ಕೋಲಾರ ಎಸ್ಪಿ ಡಿ.ಕಿಶೋರ್‌ಬಾಬು, ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಕರನ್, ಎಸಿ ಆನಂದ್ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಿ.ಚನ್ನಬಸಪ್ಪ, ಡಿಎಫ್‌ಯ ಈ.ಶಿವಶಂಕರ್ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್: ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕೇಳಿಬರುತ್ತಿದ್ದರೂ ಸಭೆಗೆ ಗೈರಾಗಿರುವ ಸ್ಲಂ ಬೋರ್ಡ್, ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಡಿಸಿ ಆರ್.ಸೆಲ್ವಮಣಿ ಸೂಚಿಸಿದರು.