ಜಿಲ್ಲೆ

ಮಾದಕವಸ್ತುಗಳಿಂದ ನಕಾರಾತ್ಮಕ ಪ್ರಭಾವ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಮಾದಕ ವಸ್ತುಗಳ ನಿಷೇಧ ಹಾಗೂ ದುಷ್ಪರಿಣಾಮಗಳ ಬಗ್ಗೆ ಶಾಲಾ, ಕಾಲೇಜು ಸೇರಿ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಾದಕ ವಸ್ತುಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು. ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಆರೋಗ್ಯಯುತ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ ಎಂದು ಡಿಸಿ ಎಚ್ಚರಿಕೆ ನೀಡಿದರು. ಮಾದಕ ವಸ್ತುಗಳ ಸೇವನೆ ಎನ್ನವುದು ಸಮಾಜದಲ್ಲಿ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಹಾಗಾಗಿ ಅದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿದೆ ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು ಎಂದು ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಅರಿವು ಮೂಡಿಸುವ ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಿ ಜನರಿಗೆ ಜಾಗೃತಿ ಮೂಡಿಸಬೇಕು, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಅಧಿಕಾರಿಗಳು, ಕಾಲಕಾಲಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದರು.

ಪೊಲೀಸ್ ಹದ್ದಿನಕಣ್ಣು: ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಸಿ.ಕೆ ಬಾಬಾ ಮಾತನಾಡಿ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಅಂತಾರಾಜ್ಯ ಮಾದಕವಸ್ತುಗಳ ಮಾರಾಟ, ಸಾಗಾಟವನ್ನು ತಡೆಯಲು ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕಿದೆ ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಕೃಷಿ ಅಧಿಕಾರಿಗಳು ಅಕ್ರಮವಾಗಿ ಗಾಂಜಾ ಬೆಳೆಯುವವರ ಬಗ್ಗೆ ನಿಗಾ ವಹಿಸಿ, ಆಗಿಂದಾಗ್ಗೆ ಸ್ಥಳ ಪರಿಶೀಲನೆ ನಡೆಸುವುದರಿಂದ ಜಮೀನುಗಳಲ್ಲಿ ಕೃಷಿ ಜತೆಗೆ ಇಂಥ ಮಾದಕ ವಸ್ತುಗಳ ಬೆಳೆ ಬೆಳೆಯುವುದನ್ನು ತಪ್ಪಿಸಬಹುದು, ಆರಂಭದಲ್ಲೇ ಇವನ್ನು ಪತ್ತೆ ಹಚ್ಚಿದರೆ ಈ ಜಾಲ ಹರಡುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು. ಹಾಸ್ಟೆಲ್, ಶಾಲಾ ಕಾಲೇಜುಗಳಲ್ಲಿ ಮಾದಕವಸ್ತು ಬಳಕೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು, ಕಸ್ಟಮ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹೊರ ರಾಜ್ಯ, ರಾಷ್ಟ್ರಗಳಿಂದ ಬರುವ ಸರಕುಗಳ ಮೇಲೆ ಇನ್ನಷ್ಟು ಬಿಗಿ ಕ್ರಮ ವಹಿಸಿ ಪರಿಶೀಲನೆ ನಡೆಸಬೇಕಿದೆ ಎಂದರು. ಜಿಲ್ಲೆಯಲ್ಲಿ ಮಾದಕವಸ್ತು, ವ್ಯಸನ ಮುಕ್ತ ಪುನರ್ವಸತಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಪುನರ್ವಸತಿ ಕೇಂದ್ರಗಳು ಇನ್ನಷ್ಟು ಆರಂಭಿಸಲು ಕ್ರಮ ವಹಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಎಸ್‌ಪಿ ಬಾಬಾ ತಿಳಿಸಿದರು.