ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪರಿಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರದ ಜತೆಗೆ ಶೀಘ್ರ ನ್ಯಾಯ ದೊರಕಿಸುವುದು ಮುಖ್ಯ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.
ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂಎಸ್‌ಸಿಪಿ, ಟಿಎಸ್‌ಪಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಪ.ಜಾತಿ,ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡು ಬಂದ ಕೂಡಲೇ ಕಾಯ್ದೆಯಡಿ ಶೀಘ್ರ ಎ್ಐಆರ್ ದಾಖಲಿಸಿ, ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ತನಿಖೆಗೆ ಒಳಪಡಿಸಬೇಕು. ಪ್ರಕರಣಗಳ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡುವುದರ ಮೂಲಕ ಸಕಾಲದಲ್ಲಿ ಸಂತ್ರಸ್ತರಿಗೆ ಪರಿಹಾರ ಧನ ನೀಡಬೇಕು. ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ, ಚಾರ್ಜ್‌ಶೀಟ್ ಅಥವಾ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯ ಒದಗಿಸಬೇಕು. ಬೇಗ ನ್ಯಾಯ ಸಿಕ್ಕಿದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿ ದೌರ್ಜನ್ಯ ಪ್ರಕರಣಗಳು ಮರುಕಳಿಸುವುದನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ತಾಲೂಕುಗಳಲ್ಲಿ ತಾಲೂಕು ಮಟ್ಟದ ಕುಂದು ಕೊರತೆ ಸಭೆ, ಉಪವಿಭಾಗ ಮಟ್ಟದ ಸಭೆಯನ್ನು ಕಡ್ಡಾಯವಾಗಿ ನಡೆಸಿ ತಾಲೂಕು ಮಟ್ಟದ, ಉಪವಿಭಾಗ ಮಟ್ಟದ ಕುಂದು ಕೊರತೆಗಳನ್ನು, ಸ್ಥಳೀಯ ಸಮಸ್ಯೆಗಳನ್ನು ನಿಮ್ಮ ಹಂತದಲ್ಲಿಯೇ ಬಗೆಹರಿಸಿ ವರದಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
6 ದೌರ್ಜನ್ಯ ಪ್ರಕರಣ ದಾಖಲು: ದೌರ್ಜನ್ಯ ಪ್ರಕರಣಗಳ ದಾಖಲು, ಪರಿಹಾರ ಧನದ ಮಂಜೂರಾತಿ ವಿವರಗಳ ಪರಿಶೀಲನೆ ವೇಳೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 6 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 9 ಸಂತ್ರಸ್ತರಿಗೆ 6.38 ಲಕ್ಷ ರೂ.ಗಳ ಪರಿಹಾರ ಧನ ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಪೊಲೀಸ್ ಠಾಣೆಗಳಲ್ಲಿ, ತಾಲೂಕು ಹಂತದಲ್ಲಿ ನಡೆಯುವ ಕುಂದು ಕೊರತೆ ಸಭೆಗಳಿಗೆ ಸಮಿತಿ ಸದಸ್ಯರನ್ನು ಆಹ್ವಾನಿಸಿ ಎಂದು ಡಿಸಿ ಸೂಚಿಸಿದರು.
ಸಫಾಯಿ ಕರ್ಮಚಾರಿಗಳಿಗೆ ಜಾಗೃತಿ: ಸಫಾಯಿ ಕರ್ಮಚಾರಿಗಳಿಗೆ ಕೆಲಸದ ಜತೆಗೆ ಆರೋಗ್ಯ ಕಾಳಜಿ ಮುಖ್ಯ, ಕೆಲಸದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಕೈ-ಕಾಲಿಗೆ ಗ್ಲೌಸ್, ರಕ್ಷಣಾತ್ಮಕ ಬಟ್ಟೆ ಧರಿಸುವುದರ ಬಗ್ಗೆ ಅರಿವಿರುವುದಿಲ್ಲ.
ಪ್ರತಿ ತಿಂಗಳು ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆ ಹಾಗೂ ಕೆಲಸದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಾಗಾರ ಏರ್ಪಡಿಸಿ ಜಾಗೃತಿ ಮೂಡಿಸಿ ಎಂದು ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ವೇತನ ಪಾವತಿ ಯಾಗಬೇಕು. ಅನಿವಾರ್ಯ ಸಂದರ್ಭಗಳಲ್ಲಿ ರಜಾದಿನಗಳನ್ನು ನೀಡಬೇಕು. ನಿವೇಶನ, ಮನೆ ಒದಗಿಸಬೇಕು, ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ವ್ಯಾಪಾರ, ವ್ಯವಹಾರಕ್ಕಾಗಿ ವಿವಿಧ ಕೌಶಲ ತರಬೇತಿ, ಮಾರ್ಗದರ್ಶನ ನೀಡಿ ಸರ್ಕಾರದಿಂದ ಸಿಗುವಂತಹ ಸಾಲ ಸೌಲಭ್ಯ ಕಲ್ಪಿಸಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂಬ ಸಮಿತಿ ಸದಸ್ಯರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ನಗರ ಪ್ರದೇಶಗಳಲ್ಲಿ ನಿವೇಶನ, ಮನೆ ಒದಗಿಸಲು ಮೊದಲ ಆದ್ಯತೆಯಾಗಿ ಸಫಾಯಿ ಕರ್ಮಚಾರಿಗಳನ್ನು ಪರಿಗಣಿಸಲಾಗುವುದು, ಕೆಲಸಕ್ಕೆ ಬೇಕಾಗುವ ಅಗತ್ಯ ಪರಿಕರಗಳನ್ನು ಅವರಿಗೆ ಒದಗಿಸಲಾಗುವುದು. ವೇತನ ಪಾವತಿಯಲ್ಲಿ ವಿಳಂಬವಾಗದಂತೆ ಕ್ರಮ ವಹಿಸಿ ಸಂಬಂಧಪಟ್ಟ ಕುಟುಂಬಗಳಿಗೆ ಕೌಶಲ್ಯ ತರಬೇತಿ ಜತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದರು. ಬಾಕಿ ಉಳಿದಿರುವ ಅನುದಾನವನ್ನು ಮಾಸಾಂತ್ಯದೊಳಗೆ ಖರ್ಚು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.