ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ವಿಳಂಬ ತೋರದೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2024 ನೇ ಸಾಲಿನ 3ನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಯಾವುದೇ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ಶೀಘ್ರವಾಗಿ ಪ್ರಕರಣ ದಾಖಲಿಸಿ ಅದರ ವಿರುದ್ಧ ಕ್ರಮ ಕೈಗೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ಇಂತಹ ಘಟನೆಗಳು ಸಂಭವಿಸದಂತೆ ಅಧಿಕಾರಿಗಳು ಎಚ್ಚರ ವಹಿಸಲು ಸೂಚನೆ ನೀಡಿದರು.ಎಲ್ಲ ತಾಲೂಕುಗಳಲ್ಲಿ ತಾಲೂಕು ಮಟ್ಟದ ಕುಂದು ಕೊರತೆ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ವರ್ಷದಲ್ಲಿ ಒಟ್ಟು 4 ಸಭೆಗಳನ್ನು ನಡೆಸಬೇಕಾಗಿದ್ದು, 2024ನೇ ಸಾಲಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಸಭೆಗಳನ್ನು ಶೀಘ್ರ ನಡೆಸಬೇಕು ಎಂದು ಹೇಳಿದರು.
ಬಾಕಿ ಇರುವ ಸಭೆಗಳನ್ನು ನಡೆಸಿ: ಉಪವಿಭಾಗದ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ವರ್ಷದಲ್ಲಿ ಒಟ್ಟು ನಾಲ್ಕು ಸಭೆಗಳನ್ನು ನಡೆಸಬೇಕಾಗಿರುತ್ತದೆ, ಈಗಾಗಲೇ ದೊಡ್ಡಬಳ್ಳಾಪುರ ವಿಭಾಗದಲ್ಲಿ ಒಂದು ಸಭೆ ನಡೆಸಲಾಗಿದ್ದು, ಇನ್ನು ಬಾಕಿ ಇರುವ 3 ಸಭೆಗಳು ನಡೆಸಲು ಡಿಸಿ ಸೂಚಿಸಿದರು.
ಇ-ಮೇಲ್ ಮಾಡಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆಯಲ್ಲಿ ಪ್ರಕರಣಗಳು ದಾಖಲಾದ ಕೂಡಲೇ ಪ್ರಥಮ ವರ್ತಮಾನ ವರದಿ ಆಧಾರದ ಮೇಲೆ ಪರಿಹಾರ ದರ ಮಂಜೂರು ಮಾಡಬೇಕಾಗಿರುವುದರಿಂದ ಪ್ರಥಮ ವರ್ತಮಾನ ವರದಿ ಹಾಗೂ ಇತರ ದಾಖಲಾತಿಗಳನ್ನು ಜಿಲ್ಲಾ ತಾಲೂಕು ಕಚೇರಿಗಳಿಗೆ ಇ-ಮೇಲ್ ಮೂಲಕ ಕಳುಹಿಸಲು ಜಿಲ್ಲಾಧಿಕಾರಿ ತಿಳಿಸಿದರು.
78 ಸಂತ್ರಸ್ತರಿಗೆ ಪರಿಹಾರ: ದೌರ್ಜನ್ಯ ಪ್ರಕರಣಗಳ ದಾಖಲು, ಪರಿಹಾರ ಧನದ ಮಂಜೂರಾತಿ ವಿವರಗಳ ಪರಿಶೀಲನೆ ನಡೆಸಿದ ಅವರು 2024ರ ಜು 1 ರಿಂದ 2024ರ ಸೆ. 22 ವರೆಗೆ 78 ಜನ ಸಂತ್ರಸ್ತರಿಗೆ 51,02,500 ರೂಪಾಯಿ ಪರಿಹಾರ ಧನ ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸುವ ಚಾರ್ಜ್‌ಶೀಟ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಳ್ಳೆಯ ಪ್ರಗತಿ ಇದೆ ಎಂದು ಹೇಳಿದರು.
45 ಪ್ರಕರಣ ದಾಖಲು: ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಹಾಗೂ ಗಲಭೆ, ಗುಂಪು ಗಲಭೆಗಳು ಹೆಚ್ಚಾಗಿ ಕಂಡುಬಂದ ಹಳ್ಳಿಗಳನ್ನು ಗುರುತಿಸಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಶಾಂತಿಸಭೆ ನಡೆಸಲು ಜಿಲ್ಲಾಧಿಕಾರಿ ನಿರ್ದೇಶನ ಮಾಡಿದರು. ಪೊಲೀಸ್ ಠಾಣೆಗಳಲ್ಲಿ ನಡೆಯುವ ಕುಂದು ಕೊರತೆ ಸಭೆಗಳಿಗೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರನ್ನು ಆಹ್ವಾನಿಸಿದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಪಡೆದುಕೊಂಡರು. ಜನವರಿಯಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ 45 ದೌರ್ಜನ್ಯ ಪ್ರಕರಣಗಳ ದಾಖಲಾಗಿವೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
-----------------=--=-=-=--=