ಜಿಲ್ಲೆ

ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ, ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾ ತಾಕೀತು

Chikkaballapur

ಚಿಕ್ಕಬಳ್ಳಾಪುರ : ಜನರ ಅಹವಾಲು ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಜಿಲ್ಲಾಧಿಕಾರಿ ಆರ್.ಲತಾ, ಮುಂಬರುವ ದಿನಗಳಲ್ಲಿ ಜಿಲ್ಲೆಯ ಇತರ ಕಡೆಗೂ ವಿಶೇಷ ಅದಾಲತ್ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ‘ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ’ ವಿನೂತನ ಅದಾಲತ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರದ ವಿವಿಧ ಸವಲತ್ತುಗಳನ್ನು ಜನರಿಗೆ ತಲುಪಿಸಲು, ಇಲಾಖೆಗಳ ಕಚೇರಿಗೆ ಅನವಶ್ಯಕವಾಗಿ ಅಲೆದಾಡುವುದನ್ನು ತಪ್ಪಿಸಲು ಮೊದಲ ಬಾರಿಗೆ ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ ಅದಾಲತ್ ಕೈಗೊಳ್ಳಲಾಗಿದೆ ಎಂದರು.

ಮಂಡಿಕಲ್ಲು ಹೋಬಳಿಯಿಂದ ವಿಶೇಷ ಅದಾಲತ್ ಪ್ರಾರಂಭಿಸಲಾಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಿಲ್ಲೆಯ ಇತರ ಕಡೆಯಲ್ಲೂ ಅನುಷ್ಠಾನವಾಗಲಿದ್ದು, ಅಧಿಕಾರಿಗಳು ಜನರ ಮನೆ ಬಾಗಿಲಿಗೆ ತೆರಳಿ ಅಹವಾಲುಗಳನ್ನು ಸ್ವೀಕರಿಸಿ, ಇತ್ಯರ್ಥಪಡಿಸಲಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಹಳ್ಳಿಯ ಜನರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ವಸತಿ ಯೋಜನೆ, ನರೇಗಾದಡಿ ವರ್ಷದಲ್ಲಿ 100ದಿನ ಕೂಲಿ ಕೆಲಸ, ಇಂಗುಗುಂಡಿ, ಕಲ್ಯಾಣಿಗಳ ಅಭಿವೃದ್ಧಿ ಸೇರಿ ವಿವಿಧ ಕೆಲಸಗಳು, ಸ್ವಚ್ಛ ಭಾರತ್ ಯೋಜನೆಯಡಿ ಶೌಚಗೃಹ ನಿರ್ಮಾಣ ಸೇರಿ ಹಲವು ಸವಲತ್ತುಗಳ ಬಗ್ಗೆ ಅದಾಲತ್‌ನಲ್ಲಿ ಅರಿವು ಮೂಡಿಸಬೇಕು ಎಂದು ಜಿಪಂ ಸಿಇಒ ಪಿ.ಶಿವಶಂಕರ್ ಸೂಚಿಸಿದರು. ಜಿಪಂ ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕಾ, ಉಪ ಕಾರ್ಯದರ್ಶಿ ನೋಮೇಶ್ ಮತ್ತಿತರರು ಇದ್ದರು.

1,394 ಎಆರ್‌ಕೆ ಕಾರ್ಡ್ ವಿತರಣೆ : ಜಿಲ್ಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಯೋಜನೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಅದಾಲತ್ ಮೂಲಕ 1,394 ಎಪಿ ಎಆರ್‌ಕೆ ಕಾರ್ಡ್ (ಆರೋಗ್ಯ ಕಾರ್ಡ್) ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಕಬಾಡೆ ಸಭೆಗೆ ಮಾಹಿತಿ ನೀಡಿದರು.

ಜ.25 ವರೆಗೂ ಮಂಡಿಕಲ್ ಅದಾಲತ್  : ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ನಲ್ಲಿ 2020ರ ನ.28 ರಂದು ಹೋಬಳಿ ಮಟ್ಟದ ಅದಾಲತ್ ಅನ್ನು ಕೈಗೊಂಡಿದ್ದು ಗ್ರಾಪಂ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಜ.1 ರಿಂದ ಮರು ಪ್ರಾರಂಭ ಮಾಡಿದ್ದು ಜ.25 ರವರೆಗೆ ನಡೆಯಲಿದೆ. ಜನರು ಅಹವಾಲುಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.