ಜಿಲ್ಲೆ

ಡಿಸಿ ಮನ್ನಾ ಸ್ಥಳಗಳ ಸಮಗ್ರ ಪಟ್ಟಿ ತಯಾರಿ: ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಿವೇಶನ ಹಾಗೂ ಕೃಷಿಗಾಗಿ ಅರ್ಹರಿಗೆ ಡಿಸಿ ಮನ್ನಾ ಜಮೀನು ನೀಡಲು ಜಿಲ್ಲೆಯ ಬೆಳ್ತಂಗಡಿ, ಮೂಡುಬಿದಿರೆ ಹಾಗೂ ಮಂಗಳೂರು ತಾಲೂಕಿನಲ್ಲಿ ಡಿಸಿ ಮನ್ನಾ ಜಮೀನು ಎಂದು ಘೋಷಿಸಲಾಗಿರುವ ಸ್ಥಳಗಳ ಪಟ್ಟಿ ಒದಗಿಸುವಂತೆ ಸಂಬಂಧಿಸಿದ ತಾಲೂಕುಗಳ ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನ ನೀಡಿದರು.
ಡಿಸಿ ಮನ್ನಾ ಜಮೀನಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.
ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಜಮೀನುಗಳು ಯಾವುವು, ಅದು ಎಷ್ಟಿದೆ ಎಂಬ ಮಾಹಿತಿಯಲ್ಲಿ ವ್ಯತ್ಯಾಸಗಳು ಕಂಡುಬಂದಿರುವುದರಿಂದ ಹಾಗೂ ಸಭೆಯಲ್ಲಿ ಸಮುದಾಯದ ಮುಖಂಡರು ಡಿಸಿ ಮನ್ನಾ ಜಮೀನು ಇನ್ನೂ ಹೆಚ್ಚು ಇದೆ ಎನ್ನುವ ವಿಚಾರ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಒಟ್ಟಾರೆಯಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಡಿಸಿ ಮನ್ನಾ ಜಮೀನು ಎಷ್ಟಿದೆ ಎಂಬುದನ್ನು ಒಂದರಿಂದ ಒಂದೂವರೆ ತಿಂಗಳಲ್ಲಿ ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ವರದಿ ಬಂದ ನಂತರ ಅದನ್ನು ಪ್ರಕಟಿಸಿ, ಸಾವರ್ಜನಿಕರಿಂದಲೂ ಆಕ್ಷೇಪಣೆ ಆಹ್ವಾನಿಸಲಾಗುವುದು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಸೀಲ್ದಾರರು, ದಕ್ಷಿಣ ಕನ್ನಡ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರಧಾನ ಸಂಚಾಲಕ ದೇವದಾಸ್, ಉಪ ಸಂಚಾಲಕ ರಮೇಶ್ ಕೋಟ್ಯಾನ್, ಅಶೋಕ್ ಕೊಂಚಾಡಿ, ಸಂಚಾಲಕರಾದ ರಘು, ಚಂದ್ರು, ಶೇಖರ್, ಬಿ.ಕೆ.ವಸಂತ, ಆನಂದ ಮೊದಲಾದವರು ಉಪಸ್ಥಿತರಿದ್ದರು.