ಜಿಲ್ಲೆ

120ಕ್ಕೇರಿದ ಅಸ್ವಸ್ಥಗೊಂಡವರ ಸಂಖ್ಯೆ, ಒರ್ವ ಗಂಭೀರ: ಮಂಡ್ಯ, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಂಡ್ಯ: ಮಳವಳ್ಳಿ ತಾಲೂಕಿನಲ್ಲಿ ಕಲುಷಿತ ಆಹಾರ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ವಸ್ಥಗೊಂಡವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಅದರಂತೆ ಈವರೆಗೆ 120 ಜನರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳ ಪೈಕಿ ಒರ್ವನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಈತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಉದ್ಯಮಿಯೊಬ್ಬರು ಹೋಳಿ ಹಬ್ಬದ ಅಂಗವಾಗಿ ತಯಾರಿಸಿದ್ದ ಊಟ ಸೇವಿಸಿದ್ದ 46 ಮಕ್ಕಳು ಹಾಗೂ ಹೋಟೆಲ್‌ನಲ್ಲಿ ಊಟ ಖರೀದಿಸಿ ತಿಂದಿರುವ 20ಕ್ಕೂ ಹೆಚ್ಚು ಕೂಲಿ ಕಾರ್ಮಿಕರು, ಹಬ್ಬದ ಆಚರಣೆ ಸಮಯದಲ್ಲಿ ಊಟ ಸೇವನೆ ಮಾಡಿರುವ ಉದ್ಯಮಿಯ 60ಕ್ಕೂ ಹೆಚ್ಚು ಸಂಬಂಧಿಕರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಿಮ್ಸ್‌ನಲ್ಲಿ ದಾಖಲಾಗಿರುವ 45 ಜನರ ಪೈಕಿ ನಾಲ್ವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ಇವರನ್ನು ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಊಟ ತಯಾರಿಸಿದ್ದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮೀನಿನ ಬಳಿಗೆ ತೆರಳಿ ಬಿಸಾಡಿದ್ದ ಸ್ಪಲ್ಪ ಪ್ರಮಾಣದ ಊಟವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಾತ್ರವಲ್ಲದೆ ಕೂಲಿಕಾರ್ಮಿಕರಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನು ಭಾನುವಾರ ಬಂಧಿತರಾಗಿದ್ದ ಹೋಟೆಲ್ ಮಾಲೀಕ ಸಿದ್ದರಾಜು, ಲಂಕೇಶ್, ಅಭಿಷೇಕ್ ಅವರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಊಟ ತಯಾರು ಮಾಡಿದ್ದ ಹೋಟೆಲ್ ಮುಚ್ಚಿಸಲಾಗಿದೆ. ಹೋಳಿ ಆಚರಣೆಗಾಗಿ 150 ಜನರಿಗೆ ಊಟ ತಯಾರಿಸಲಾಗಿತ್ತು. ಅದರಂತೆ ಊಟ ಸೇವಿಸಿದ್ದ ಉದ್ಯಮಿಯ ಸಂಬಂಧಿಕರು ಅಸ್ವಸ್ಥಗೊಂಡರೆ, ಉಳಿದ ಆಹಾರವನ್ನು ಹೋಟೆಲ್‌ನಲ್ಲಿ ಮಾರಾಟ ಮಾಡಲಾಗಿತ್ತು. ಆ ಊಟ ಮಾಡಿದ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.