ಕುಷ್ಠರೋಗ ನಿಮೂರ್ಲನಾ ಅಭಿಯಾನ ಪೋಸ್ಟರ್​ನ್ನು ಶುಕ್ರವಾರ ಡಿಸಿ ನಲಿನ್​ ಅತುಲ್​ ಕೊಪ್ಪಳದಲ್ಲಿ ಬಿಡುಗಡೆಗೊಳಿಸಿದರು. ಡಿಎಚ್​ಒ ಡಾ.ಟಿ.ಲಿಂಗರಾಜು, ಡಿಎಸ್​ಒ ಡಾ.ನಂದಕುಮಾರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​., ಡಿಟಿಒ ಡಾ.ಶಶಿಧರ ಎ., ಸಿಎಂಒ ಡಾ.ಈಶ್ವರ ಸವಡಿ, ಕಿಮ್ಸ್​ ಎಚ್​ಒಡಿ ಡಾ.ನಾರಾಯಣ ಇದ್ದರು. 
ಜಿಲ್ಲೆ

ಕುಷ್ಠರೋಗ ನಿಮೂರ್ಲನೆಗೆ ಸಹಕರಿಸಿ, ಡಿಸಿ ನಲಿನ್​ ಅತುಲ್​ ಮನವಿ

ಕೊಪ್ಪಳ: ಜಿಲ್ಲೆಯಲ್ಲಿ ಜು.29- ಆ.14ವರೆಗೆ ಕುಷ್ಠರೋಗ ಪತ್ತೆ ಅಭಿಯಾನ ನಡೆಯಲಿದೆ. ಅಧಿಕಾರಿಗಳು ಸಾರ್ವಜನಿಕರು ಭಾಗಿಯಾಗಿ ರೋಗ ನಿಮೂರ್ಲನೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಅಭಿಯಾನ ಅಂಗವಾಗಿ ಶುಕ್ರವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಅಭಿಯಾನ ಕುರಿತು ಧ್ವನಿವರ್ಧಕಗಳು, ತ್ಯಾಜ್ಯ ಸಂಗ್ರಹ ವಾಹನಗಳ ಮೂಲಕ ಜಾಗೃತಿ ಮೂಡಿಸಿ. ನಗರ ಪ್ರದೇಶದಲ್ಲಿ ವಾರ್ಡ್​ ಸದಸ್ಯರಿಗೆ ಮಾಹಿತಿ ನೀಡಿ. ಗ್ರಾಮದಲ್ಲಿ ಮುಖಂಡರು ಒಳಗೊಂಡು ಎಲ್ಲರೂ ಇರುವಂತೆ ನೋಡಿಕೊಳ್ಳಿ. ಆಶಾ, ಆರೋಗ್ಯ ಕಾರ್ಯಕರ್ತರಿಂದ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸುವಂತೆ ತಿಳಿಸಿ. ಶಾಲಾ ಮಕ್ಕಳ ಮೂಲಕ ಜಾಥಾ ಹಮ್ಮಿಕೊಳ್ಳಿ. ವಸತಿ ಶಾಲೆಗಳ ಮೇಲ್ವಿಚಾರಕರು ಆರೋಗ್ಯ ಕಾರ್ಯಕರ್ತರಿಗೆ ಸಹರಕರಿಸಿ. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿರುವ ಪ್ರದೇಶದಲ್ಲಿ ಆದ್ಯತೆ ಅನುಸಾರ ಕ್ರಮವಹಿಸಿ. ಬಾಧಿತರಿಗೆ ಚಿಕಿತ್ಸೆ, ಔಷಧ ನೀಡಿ. ರೋಗ ಲಕ್ಷಣ, ಸುರಾ ಕ್ರಮಗಳ ಬಗ್ಗೆ ತಿಳಿಸಿ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವಂತೆ ತಿಳಿಸುವಂತೆ ಸೂಚಿಸಿದರು.

ಜಿಲ್ಲಾ ಕುಷ್ಠರೋಗ ನಿಮೂರ್ಲನಾ ಅಧಿಕಾರಿ ಡಾ.ಎಚ್​.ಪ್ರಕಾಶ ಮಾತನಾಡಿ, ಅಭಿಯಾನದಲ್ಲಿ ಮನೆ ಭೇಟಿ ನೀಡಿದಾಗ ರೋಗ ಲಕ್ಷಣ ಆಧರಿಸಿ ಶಂಕಿತ ಪ್ರಕರಣಗಳ ಪತ್ತೆಗೆ ಆಶಾ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 161 ಪ್ರಕರಣಗಳು ಪತ್ತೆಯಾಗಿವೆ. ರೋಗ ಪತ್ತೆ, ಅದರಿಂದ ಆಗುವ ಪರಿಣಾಮ, ಮುಂದೆ ಹರಡದಂತೆ ತಡೆಯುವುದು ಅಭಿಯಾನದ ಉದ್ದೇಶ. ಅಭಿಯಾನದಲ್ಲಿ ಭಾಗಿಯಾಗುವವರಿಗೆ ಜಾಗೃತಿ ತರಬೆತಿ ನೀಡಲಾಗಿದೆ ಎಂದರು.

ಡಿಎಚ್​ಒ ಡಾ.ಟಿ.ಲಿಂಗರಾಜು, ಡಿಎಸ್​ಒ ಡಾ.ನಂದಕುಮಾರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​., ಡಿಟಿಒ ಡಾ.ಶಶಿಧರ ಎ., ಸಿಎಂಒ ಡಾ.ಈಶ್ವರ ಸವಡಿ, ಕಿಮ್ಸ್​ ಎಚ್​ಒಡಿ ಡಾ.ನಾರಾಯಣ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​, ತಾಪಂ ಇಒ ದುಂಡಪ್ಪ ತುರಾದಿ ಇತರರಿದ್ದರು.