raichur 
ಜಿಲ್ಲೆ

ನಗರದಲ್ಲಿ ನಡೆಯುವ ಸೇನಾ ನೇಮಕಾತಿ ರ‌್ಯಾಲಿಗೆ ಅಗತ್ಯ ಸಿದ್ಧತೆಗೆ ಡಿಸಿ ಸೂಚನೆ

ರಾಯಚೂರು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 04 ರಿಂದ 22ರವರೆಗೆ ನಡೆಯುವ ಸೇನಾ ನೇಮಕಾತಿ ರ‌್ಯಾಲಿಯು ಅಚ್ಚುಕಟ್ಟಾಗಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ., ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಭವನದಲ್ಲಿ ಬುಧವಾರ ಸಂಜೆ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿ ಮಾತನಾಡಿದವರು, ಸೇನಾ ನೇಮಕಾತಿ ರ‌್ಯಾಲಿಯ ಬಗ್ಗೆ ಈ ಹಿಂದೆ ಜು. 4 ರಂದು ಸಭೆ ನಡೆಸಿ ಸೂಚನೆ ನೀಡಿದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಈ ರ‌್ಯಾಲಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಂದಾಜು 15,000 ಅಭ್ಯರ್ಥಿಗಳು ಭಾಗವಹಿಸಲಿದ್ದು, ಯಶಸ್ಸಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ನೇಮಕಾತಿ ರ‌್ಯಾಲಿ ನಡೆಯುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಬ್ಯಾರಿಕೇಡ್ ವ್ಯವಸ್ಥೆ, ಕ್ರೀಡಾಂಗಣದಲ್ಲಿ ವಿದ್ಯುತ್ ದೀಪಗಳು ಮತ್ತು ಜನರೇಟರ್ ವ್ಯವಸ್ಥೆ ಮತ್ತು ಆಸನ, ಕುರ್ಚಿಗಳು, ಟೇಬಲ್‌ಗಳು, ಮೈಕ್ ಸೆಟ್, ಖಾಟ್ ಮತ್ತು ಹಾಸಿಗೆ ಹಾಗೂ ತ್ಯಾಜ್ಯದ ತೊಟ್ಟಿಗಳ ವ್ಯವಸ್ಥೆಯಾಗಬೇಕು. ರ‌್ಯಾಲಿಗೆ ಆಗಮಿಸುವ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ಇತರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ಕ್ರೀಡಾಂಗಣದಲ್ಲಿ ಜನಸಂದಣಿ ತಡೆಯಬೇಕು. ಕ್ರೀಡಾಂಗಣದ ಹೊರಗಡೆ ಸಾರ್ವಜನಿಕ ರಸ್ತೆ ಸಂಚಾರಕ್ಕೆ ತೊಂದರೆಯಾಗದಅತೆ ಕ್ರಮ ವಹಿಸಬೇಕು ಎಂದರು.

ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕುಡಿಯುವ ನೀರಿಗಾಗಿ ನಳಗಳ ವ್ಯವಸ್ಥೆ ಮಾಡಬೇಕು. ಸಿಬ್ಬಂದಿಗು ಸಹ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೊಬೈಲ್ ಶೌಚಾಲಯಗಳ ಬಳಕೆ ಮತ್ತು ಅವುಗಳಿಗೆ ಟ್ಯಾಂಕರ್‌ಗಳ ಮೂಲಕ ನೀರನ್ನು ಒದಗಿಸಲು ಕ್ರಮ ವಹಿಸಬೇಕು. ಪ್ರತಿದಿನ ಕ್ರೀಡಾಂಗಣವನ್ನು ಶುಚಿಗೊಳಿಸಬೇಕು. ವಸ್ತುಗಳ ವೀಲೆ ಮಾಡಲು ಹಾಗೂ ಅಗತ್ಯವಿದ್ದಲ್ಲಿ ಸ್ವಚ್ಛತಾ ಸಿಬ್ಬಂದಿ ನಿಯೋಜಿಸಬೇಕು.

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿರುವ ಅಭ್ಯರ್ಥಿಗಳ ವಾಸ್ತವ್ಯಕ್ಕೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಬೇಕು. ಅಭ್ಯರ್ಥಿಗಳು ತಂಗುವ ಸ್ಥಳದಿಂದ ಬಂದು ಹೋಗಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು.ರ‌್ಯಾಲಿಯ ಸಂದರ್ಭದಲ್ಲಿ ವೈದ್ಯರು ಮತ್ತು ಶುಶ್ರೂಷ ಸಹಾಯಕಿಯರ ಸಿಬ್ಬಂದಿಯನ್ನು ಅಗತ್ಯಕ್ಕನುಗುಣವಾಗಿ ನಿಯೋಜಿಸಬೇಕು. ಅವಶ್ಯಕ ಹಾಗೂ ಜೀವರಕ್ಷಕ ಔಷಧಿಗಳ ವ್ಯವಸ್ಥೆ ಒದಗಿಸಬೇಕು. ಬೆಳಗ್ಗೆಯಿಂದ ಸಂಜೆವರೆಗೆ ಆರೋಗ್ಯ ಸೇವೆ ಒದಗಿಸಬೇಕು. ಅಂಬುಲೈನ್ಸ್ ಸೌಲಭ್ಯದೊಂದಿಗೆ ವಾಹನ ಸಿದ್ಧವಾಗಿಟ್ಟುಕೊಳ್ಳಬೇಕು. ಆಹಾರ ಗುಣಮಟ್ಟ ಪರಿಶೀಲನೆ ಮಾಡಬೇಕು.

ಕ್ರೀಡಾಂಗಣದಲ್ಲಿ ನಡೆಯುವ ಸೇನಾ ನೇಮಕಾತಿ ರ‌್ಯಾಲಿ ಮುಗಿಯುವವರೆಗೆ ಯಾವುದೇ ರೀತಿ ವಿದ್ಯುತ್ ವ್ಯತ್ಯಯ ಆಗದ ರೀತಿಯಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಎಸಿ ಗಜಾನನ ಬಾಳೆ, ಮಾಜಿ ಸೈನಿಕರಾದ ಚೆನ್ನಾರೆಡ್ಡಿ, ಸಿದ್ದಯ್ಯ ಸ್ವಾಮಿ, ಅಮರಪ್ಪ ಶಿವಬಲ್ಲ, ದೇವರೆಡ್ಡಿ, ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.