ಧಾರವಾಡ: ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿಯನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪರಿಶೀಲಿಸಿದರು. ಜನವರಿ 2026 ರೊಳಗೆ ಕಾಲೇಜು ಕಟ್ಟಡ ಪೂರ್ಣಗೊಳಿಸಿ, ಬಳಕೆ ನೀಡಬೇಕೆಂದು ನಿರ್ಮಾಣ ಸಂಸ್ಥೆಗೆ ಸೂಚಿಸಿದರು.
ಕಾಲೇಜಿನ ಪ್ರಗತಿ, ಕಟ್ಟಡದ ಮೂಲಸೌಕರ್ಯ, ವಿದ್ಯಾರ್ಥಿನಿಯರ ಅಗತ್ಯಗಳು ಹಾಗೂ ತರಗತಿಗಳ ಸೌಲಭ್ಯಗಳನ್ನು ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳದಲ್ಲಿ ಚರ್ಚಿಸಿದರು.
ನಂತರ ಅವರು ಮಾತನಾಡಿದ ಜಿಲ್ಲಾಧಿಕಶರಿಗಳು, ಶೈಕ್ಷಣಿಕವಾಗಿ ಬಹು ಉಪಯೋಗವಾಗುವ ರೀತಿಯಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಬೇಕು. ವಿದ್ಯಾರ್ಥಿನಿಯರಿಗಾಗಿ ಅಗತ್ಯ ಸೌಕರ್ಯಗಳು ದೊರಕುವಂತೆ ನೋಡಿಕೊಳ್ಳಬೇಕು. ಶೀಘ್ರದಲ್ಲಿ ವ್ಯವಸ್ಥಿತವಾದ ಕಟ್ಟಡವನ್ನು ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಅವರು ಸೂಚಿಸಿದರು.
ಸದರಿ ಕಟ್ಟಡವನ್ನು ನಿಗದಿತ ಕಾಲಾವಧಿಯಲ್ಲಿ ಸಂಪೂರ್ಣವಾಗಿ ಮುಗಿಸಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದರು.
ಕಾಲೇಜು ಪ್ರಾಚಾರ್ಯರ ಡಾ.ಎಸ್.ಎಸ್.ಅಂಗಡಿ ಅವರು ಮಾತನಾಡಿ, ಹಳೆ ಕಟ್ಟಡದ ಸ್ಥಿತಿ, ಅಗತ್ಯ ದುರಸ್ತಿ ಹಾಗೂ ಇನ್ನಷ್ಟು ತರಗತಿ ಕೊಠಡಿಗಳ ಅವಶ್ಯಕತೆ ಇರುವ ಕುರಿತು ವಿವರಿಸಿದರು.
ಈ ವೇಳೆ ತಹಸೀಲ್ದಾರ್ ಡಾ.ಡಿ.ಎಚ್. ಹೂಗಾರ, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಭಿಯಂತರ ನಂದಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಹಾಯಕ ನಿರ್ದೇಶಕ ಲಕ್ಷ್ಮಿಪತಿ, ಮಹಿಳಾ ಕಾಲೇಜು ಉಪಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.