ದೊಡ್ಡಬಳ್ಳಾಪುರ ತಾಲೂಕು ಆದಿನಾರಾಯಣ ಹೊಸಹಳ್ಳಿಯಲ್ಲಿ ಜಿಲ್ಲಾಧಿಕಾರಿ ವಸತಿಗೃಹ ನಿರ್ಮಾಣಕ್ಕಾಗಿ ಕಾಯ್ದಿರಿಸಿದ ಜಮೀನಿನಲ್ಲಿ ಭೂಮಿ ಹದಗೊಳಿಸಿರುವುದು. 
ಜಿಲ್ಲೆ

ಜಿಲ್ಲಾಧಿಕಾರಿ ವಸತಿಗೃಹ ಜಾಗ ಕಬಳಿಕೆ?

ಕಾಯ್ದಿರಿಸಿದ ಜಮೀನಿನಲ್ಲಿ ಬಿತ್ತನೆ ಕಾರ್ಯ

ಮಾತೃ ಇಲಾಖೆಗೇ ಗ್ರಹಣ


ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಎಲ್ಲ ಇಲಾಖೆಗಳಿಗೂ ಮಾತೃ ಇಲಾಖೆ ಎನಿಸಿರುವ ಕಂದಾಯ ಇಲಾಖೆಗೇ ಗ್ರಹಣ ಹಿಡಿದಂತಿದೆ. ಗ್ರಾಮಾಂತರ ಜಿಲ್ಲೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಿಡಿದಿರುವ ಗ್ರಹಣದಿಂದ ಜಿಲ್ಲಾಧಿಕಾರಿ ವಸತಿಗೃಹ ನಿರ್ಮಾಣಕ್ಕೆ ಕಾಯ್ದಿರಿಸಿದ ಜಮೀನಿಗೇ ಕುತ್ತು ಬರುವಂತಾಗಿದೆ!
ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿಯ ಆದಿನಾರಾಯಣ ಹೊಸಹಳ್ಳಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ವಸತಿಗೃಹ ನಿರ್ಮಾಣಕ್ಕಾಗಿ ಜಮೀನು ಕಾಯ್ದಿರಿಸಿದೆ. ಇದರ ಜತೆಗೆ ಜಿಲ್ಲಾ ಕ್ರೀಡಾಂಗಣಕ್ಕೂ ಇದೇ ಜಮೀನಿನಲ್ಲಿ ಸ್ಥಳ ಗುರುತಿಸಲಾಗಿದೆ. ಜಿಪಂ ಕಾರ್ಯನಿರ್ವಹಣಾಧಿಕಾರಿಗಳ ವಸತಿ ಗೃಹಕ್ಕೆ ಹೊಂದಿಕೊಂಡಂತಿರುವ ಕಾಯ್ದಿರಿಸಿದ ಜಮೀನಿನಲ್ಲಿ ಭೂಮಿ ಹದ ಮಾಡುವ ಕಾರ್ಯ ನಡೆದಿದ್ದು ಬಿತ್ತನೆ ಕಾರ್ಯ ಆರಂಭಿಸಲಾಗಿದೆ.
ಸರ್ಕಾರಿ ಜಮೀನಿಗೆ ರಕ್ಷಣೆ ಇಲ್ಲ: ಗುಂಡುತೋಪು, ಸ್ಮಶಾನ ಸೇರಿ ಯಾವುದೇ ಸರ್ಕಾರಿ ಜಮೀನುಗಳಿದ್ದರೂ ಅದನ್ನು ಗುರುತಿಸಿ ಅವುಗಳನ್ನು ರಕ್ಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಆಗಾಗ ಖಡಕ್ ಸೂಚನೆ ನೀಡುತ್ತಲೇ ಇರುತ್ತಾರೆ, ಸರ್ವೇ ನಡೆಸಿ ಹದ್ದುಬಸ್ತು ಮಾಡಿ ೆನ್ಸಿಂಗ್‌ನಂತ ಕ್ರಮಗಳ ಮೂಲಕ ಸರ್ಕಾರಿ ಜಮೀನುಗಳನ್ನು ರಕ್ಷಣೆ ಮಾಡಬೇಕು ಎಂದು ಸೂಚಿಸುತ್ತಲೇ ಬಂದಿದ್ದಾರೆ. ಆದರೆ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಇಂಥ ಸೂಚನೆಗಳನ್ನು ಕಿವಿಮೇಲೆ ಹಾಕಿಕೊಳ್ಳುವುದಿಲ್ಲ ಎಂಬ ಆರೋಪವಿದೆ. ಇಂಥ ಆರೋಪಕ್ಕೆ ಪ್ರತ್ಯಕ್ಷ ನಿದರ್ಶನ ಎಂಬಂತೆ ಡಿಸಿ ವಸತಿಗೃಹಕ್ಕೆ ಮೀಸಲಿಟ್ಟ ಜಾಗ ಬಿತ್ತನೆ ಕಾರ್ಯಕ್ಕೆ ಅಣಿಯಾಗಿದೆ.
ವಿಎ, ಆರ್‌ಐ ಎಲ್ಲಿ? ಈ ಸಚಿವ ಕೃಷ್ಣೇಬೈರೇಗೌಡ ಸರ್ಕಾರಿ ಜಮೀನುಗಳ ರಕ್ಷಣೆಗಾಗಿಯೇ ಲ್ಯಾಂಡ್ ಬೀಟ್ ಎಂಬ ಪದ್ದತಿ ಪರಿಚಯಿಸಿದ್ದರು. ವಿಎಗಳು ಹಾಗೂ ಆರ್‌ಐಗಳು ಆಗಾಗ ಸರ್ಕಾರಿ ಜಮೀನುಗಳ ಬಳಿ ಭೇಟಿ ನೀಡಿ ಅದೇ ಸರ್ವೇ ನಂಬರ್‌ನ ಜಮೀನುಗಳಲ್ಲಿ ನಿಂತು ಪೋಟೋ ವಿಡಿಯೋಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂಬ ನಿಯಮ ಜಾರಿಗೊಳಿಸಿದ್ದರು. ಅದಕ್ಕಾಗಿಯೇ ಅಧಿಕಾರಿಗಳಿಗೆ ಲಾಗಿನ್ ಐಡಿ ನೀಡಲಾಗಿತ್ತು. ಆದರೆ ಇದೆಲ್ಲ ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಭೂಮಿ ಹದ ಮಾಡಿದವರ‌್ಯಾರು? ದೇವನಹಳ್ಳಿ ತಾಲೂಕು ಚಪ್ಪರದಕಲ್ಲಿನಲ್ಲಿ ಜಿಲ್ಲಾಡಳಿತಭವನ ನಿರ್ಮಾಣವಾದ ಬಳಿಕ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗಳಿಗಾಗಿ ವಸತಿ ಗೃಹ ನಿರ್ಮಾಣಕ್ಕಾಗಿ ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿಯ ಆದಿನಾರಾಯಣ ಹೊಸಹಳ್ಳಿಯಲ್ಲಿ ಜಮೀನು ಕಾಯ್ದಿರಿಸಲಾಗಿತ್ತು. ಎರಡು ವರ್ಷದ ಹಿಂದೆಯೇ ಜಿಪಂ ಸಿಇಒ ವಸತಿ ಗೃಹ ನಿರ್ಮಾಣವಾಯಿತು. ಆದರೆ ಇದುವರೆಗೆ ಡಿಸಿ ವಸತಿ ಗೃಹ ನಿರ್ಮಾಣಕ್ಕೆ ಕಾಲ ಕೂಡಿಬಂದಿಲ್ಲ. ಇದರ ನಡುವೆ ಕಾಯ್ದಿರಿಸಿದ ಜಮೀನಿನಲ್ಲಿ ಭೂಮಿ ಹದ ಮಾಡಿ ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿರುವ ದೃಶ್ಯ ಕಂಡುಬಂದಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಯ್ದಿರಿಸಿದ ಜಮೀನು ಪರಾಭಾರೆಯಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಭೂಮಿ ಹದ ಮಾಡಿದವರು ಯಾರು? ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಚೀಪ್ ಆಫೀಸರ್ ಗಮನಿಸಿಲ್ಲವೇ? ಆದಿನಾರಾಯಣ ಹೊಸಹಳ್ಳಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ, ಇದರ ಚ್ೀ ಆಫಿಸರ್ ಗಮನಕ್ಕೂ ಇದು ಬಂದಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಈ ಹಿಂದೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯಾನಗಳಿಗೆ ಮೀಸಲಿಟ್ಟ ಜಾಗವನ್ನು ಖಾಸಗಿಯವರು ಕಬಳಕೆ ಮಾಡಿದ್ದರು ಎಂಬ ವಿವಾದ ಸೃಷ್ಟಿಯಾಗಿ ದೊಡ್ಡ ಸುದ್ದಿಯಾಗಿತ್ತು. ಆದರೂ ಸರ್ಕಾರಿ ಆಸ್ತಿಗಳ ರಕ್ಷಣೆ ಬಗ್ಗೆ ಅಧಿಕಾರಿಗಳಿಗೆ ಇಷ್ಟೇಕೆ ನಿರ್ಲಕ್ಷ್ಯ ಎಂಬುದು ಸಾರ್ವಜನಿಕರ ಬೇಸರವಾಗಿದೆ.

ಜಿಲ್ಲಾಧಿಕಾರಿ ವಸತಿ ಗೃಹ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದ ಕಬಳಿಕೆಗೆ ಅವಕಾಶ ನೀಡುವುದಿಲ್ಲ. ಈ ರೀತಿ ಮಾಡಲು ಸಾಧ್ಯವಿಲ್ಲ, ಇದು ನನ್ನ ಗಮನಕ್ಕೆ ಬಂದಿಲ್ಲ, ತಕ್ಷಣವೇ ನಮ್ಮ ವಿಲೇಜ್ ಅಕೌಂಟೆಂಟ್ ಮತ್ತು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ವಾಸ್ತವ ಪರಿಶೀಲಿಸುವಂತೆ ಸೂಚಿಸುತ್ತೇನೆ. ಸ್ಥಳ ಪರಿಶೀಲನೆ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು.

ವಿಭಾ ರಾಥೋಡ್, ತಹಸೀಲ್ದಾರ್ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿಯ ಆದಿನಾರಾಯಣ ಹೊಸಹಳ್ಳಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ವಸತಿಗೃಹ ನಿರ್ಮಾಣಕ್ಕಾಗಿ ಜಮೀನು ಕಾಯ್ದಿರಿಸಿದ ಜಮೀನಿನಲ್ಲಿ ಯಾರೂ ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿರುವುದು ಕಂಡುಬಂದಿದೆ. ಇದು ನಿಜಕ್ಕೂ ಆಶ್ಚರ್ಯ ಎನಿಸಿತು. ಸರ್ಕಾರಿ ಭೂಮಿಗಳ ರಕ್ಷಣೆ ಮಾಡಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ನಿಜಕ್ಕೂ ಕೈಕಟ್ಟಿ ಕುಳಿತಿದ್ದಾರಾ ಎನಿಸುತ್ತಿದೆ.

ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ