ಜಿಲ್ಲೆ

ಔದ್ಯೋಗಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿ: ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸಲಹೆ

Chikkaballapur

ಚಿಕ್ಕಬಳ್ಳಾಪುರ: ಪ್ರತಿನಿತ್ಯ ವಿದ್ಯಾರ್ಥಿಗಳು ಕನಿಷ್ಟ ಒಂದು ತಾಸು ಗ್ರಂಥಾಲಯದಲ್ಲಿ ದಿನಪತ್ರಿಕೆ, ಪರಾಮರ್ಶನ ಗ್ರಂಥ ಮತ್ತು ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಓದಬೇಕು. ಇದು ಶಿಕ್ಷಣ ಸಂಸ್ಥೆಯಲ್ಲಿನ ಕಲಿಕೆ ಜತೆಗೆ ಹೆಚ್ಚಿನ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು.
ಜಿಲ್ಲಾ ಕೇಂದ್ರದ ವಿವಿಧ ವಿದ್ಯಾರ್ಥಿನಿಲಯಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಸರ್ಕಾರವು ಹಿಂದುಳಿದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶುಲ್ಕ ವಿನಾಯಿತಿ, ವಿದ್ಯಾಸಿರಿ, ಪ್ರೋತ್ಸಾಹ ಧನ, ವಿದ್ಯಾರ್ಥಿವೇತನ ಸೇರಿ ನಾನಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವುದಲ್ಲದೇ ಸಮಾಜದ ವಿವಿಧ ಕ್ಷೇತ್ರಗಳ ಬಗೆಗಿನ ಅರಿವು ಹೊಂದಿರಬೇಕು. ವಿದ್ಯಾಭ್ಯಾಸ ಮುಗಿದ ಬಳಿಕ ಔದ್ಯೋಗಿಕ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಲು ಶ್ರಮಿಸಬೇಕು. ಉತ್ತಮ ಉದ್ಯೋಗಾವಕಾಶ ಪಡೆದುಕೊಳ್ಳಲು ವಿಶೇಷ ಕೌಶಲ ಮತ್ತು ಚುರುಕಿನ ನಿರ್ವಹಣೆ, ಹೊಂದಾಣಿಕೆ ಸೇರಿ ವಿಶೇಷ ಸಾಮರ್ಥ್ಯಗಳ ಅಗತ್ಯ. ಇದರಿಂದ ಒಳ್ಳೆಯ ಹೆಸರನ್ನು ಗಳಿಸಬಹುದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ನಿಲಯಗಳ ಕಾರ್ಯವೈಖರಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಹಾಗೆಯೇ ಮಕ್ಕಳೊಂದಿಗೆ ಊಟ ಸವಿದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಕೆಗೆ ಸಂಬಂಧಿಸಿದ ಅಗತ್ಯ ಕೌಶಲಗಳ ಬಗ್ಗೆ ತಿಳಿಸಿದರು. ಇದೇ ವೇಳೆ ವಿದ್ಯಾರ್ಥಿಗಳ ವಾಸದ ಕೊಠಡಿ, ಊಟದ ಕೋಣೆ, ಆಹಾರ ತಯಾರಿಕೆ ಕೋಣೆ, ಆಹಾರ ದಾಸ್ತಾನು ಕೋಣೆ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ವೀಕ್ಷಿಸಿ, ಉತ್ತಮ ಸ್ವಚ್ಛತೆ ನಿರ್ವಹಣೆಗೆ ಸಲಹೆ ನೀಡಿದರು. ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾದರಿ ಬಾಲಕಿಯರ ವಿದ್ಯಾರ್ಥಿನಿಲಯ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಸ್ವಚ್ಛತೆ ಮತ್ತು ಕುಡಿಯುವ ನೀರು ಸೇರಿ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ್ ಮತ್ತಿತರರು ಇದ್ದರು.