ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರೈತರಿಗೆ ಬೆಳೆ ವಿಮೆ ನೋಂದಣಿ ಮಾಡಿಸುವುದರಿಂದಾಗುವ ಲಾಭ ಹಾಗೂ ಅನುಕೂಲಗಳ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ. ಕೃಷಿ, ತೋಟಗಾರಿಕೆ ಅಧಿಕಾರಿಗಳು ಮತ್ತು ಬೆಳೆ ವಿಮಾ ಸಂಸ್ಥೆಗಳು ಜಂಟಿಯಾಗಿ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಅರಿವು ಮೂಡಿಸುವ ಮೂಲಕ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚಿಸಿದರು.
ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಹೋಬಳಿ ಮಟ್ಟದಲ್ಲಿ ವಾರಕ್ಕೊಮ್ಮೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ರೈತರ ಕೃಷಿ ಕಾರ್ಯಾಗಾರ ಆಯೋಜನೆ ಮಾಡಿ, ರೋಗ ಬಾಧೆಯಿಂದ ಬೆಳೆಯ ರಕ್ಷಣೆ, ಗೊಬ್ಬರ ಪೂರೈಕೆ, ಇಳುವರಿ ಹೆಚ್ಚಿಸುವ ಬೆಳೆಗಳ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಬೆಳೆ ವಿಮೆ ನೋಂದಣಿಗೆ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು. ಪ್ರಸಕ್ತ ವರ್ಷದಲ್ಲಿರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮಟ್ಟದಲ್ಲಿ ನೋಂದಣಿಯಾಗಿ ಗುರಿ ಸಾಧಿಸಬೇಕು ಈ ಹಿನ್ನೆಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಡಿಯಲ್ಲಿ ಬರುವ ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರೈತರಿಗೆ ಆರ್ಥಿಕ ಭದ್ರತೆ: 2024 ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಡಿಸಿ ತಿಳಿಸಿದರು.ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸುವುದು. ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವಿನ ಹಂತದವರೆಗೆ) ಬರ, ಶುಷ್ಕ ಪರಿಸ್ಥಿತಿ, ನೆರೆ, ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆ ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟ ಪರಿಹಾರವನ್ನು ಒದಗಿಸುವುದು ಯೋಜನೆಯ ಪ್ರಮುಖ ಅಂಶಗಳಾಗಿರುತ್ತವೆ ಎಂದು ವಿವರಿಸಿದರು.
ಕಡೆಯ ದಿನಾಂಕದ ಮಾಹಿತಿ ನೀಡಬೇಕು: ಆಯಾ ತಾಲೂಕಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮುಖ್ಯ ಬೆಳೆಯಾಗಿ ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ) ಹಾಗೂ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ), ತೊಗರಿ (ಮಳೆಯಾಶ್ರಿತ ಹಾಗೂ ನೀರಾವರಿ), ನೆಲಗಡಲೆ (ಮಳೆಯಾಶ್ರಿತ) ಹುರುಳಿ (ಮಳೆಯಾಶ್ರಿತ) ಮತ್ತು ಟೊಮ್ಯಾಟೋ ಬೆಳೆಗಳನ್ನು ಇತರೆ ಬೆಳೆಗಳಾಗಿ ಅಧಿಸೂಚಿಸಲಾಗಿದೆ.