ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಏ.29 ಮತ್ತು 30ರಂದು ಇವಿಎಂ ಮತ ಯಂತ್ರಗಳಿಗೆ ಮತಪತ್ರಗಳನ್ನು ಅಳವಡಿಸಲಾಗುವುದು. ಅಂಚೆ ಮತಪತ್ರಗಳನ್ನು ಸ್ಥಳೀಯವಾಗಿ ಮುದ್ರಿಸಿಕೊಳ್ಳಲು ಮುದ್ರಣಾಲಯವನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿ ಬಳಿಕ ನಮೂನೆ 7ಎ ಅನ್ನು ಪ್ರಚುರಪಡಿಸಿ ಆಯೋಗದಿಂದ ಅನುಮೋದನೆಯಾದ ನಂತರ ಮತಪತ್ರವನ್ನು ಮುದ್ರಿಸಲಾಗುವುದು. ವಿದ್ಯುನ್ಮಾನ ಮತಯಂತ್ರ ಹಾಗೂ ಟೆಂಡರ್ ಮತದಾರರಿಗೆ ಅಗತ್ಯವಿರುವ ಮತಪತ್ರವನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿಸಲಾಗುವುದು. 29ರಂದು ಇವಿಎ ಮತಯಂತ್ರಗಳ ರ‌್ಯಾಂಡಮೈಜೇಷನ್ ಕಾರ್ಯ ಕೈಗೊಂಡು ಮತಗಟ್ಟೆಗಳಿಗೆ ಇವಿಎಂ ಯಂತ್ರಗಳಿಗೆ ಮತಪತ್ರಗಳನ್ನು ಜೋಡಿಸುವ ಕಾರ್ಯವನ್ನು ಅಭ್ಯರ್ಥಿಗಳು ಅಥವಾ ಅವರು ನೇಮಿಸಿದ ಚುನಾವಣಾ ಏಜೆಂಟರುಗಳ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ 87,629 ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿ ಅಂಚೆ ಮೂಲಕ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಪಕ್ಷವಾರು ತಾರಾ ಪ್ರಚಾರಕರ ಪಟ್ಟಿಯನ್ನು ಸಲ್ಲಿಸಿದ್ದು, ಚುನಾವಣಾ ಆಯೋಗದಿಂದ ಸ್ವೀಕೃತವಾದ ಸದರಿ ಪಟ್ಟಿಯನ್ನು ಎಲ್ಲ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಇನ್ನು ಕಣದಲ್ಲಿ ಉಳಿಯುವ ಅಂತಿಮ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಚುನಾವಣಾಧಿಕಾರಿಗಳು ಹಂಚಿಕೆ ಮಾಡಲಿದ್ದಾರೆ. ಮಾನ್ಯತೆ ಪಡೆದ ರಾಷ್ಟ್ರ ಮತ್ತು ರಾಜ್ಯ ಪಕ್ಷದವರಿಂದ ಅಭ್ಯರ್ಥಿಗಳಿಗೆ (ಎ ಮತ್ತು ಬಿ ಫಾರ್ಮ್) ಚುನಾವಣಾ ಆಯೋಗದಿಂದ ಹಂಚಿಕೆಯಾಗಿರುವ ಚಿಹ್ನೆಗಳನ್ನು ನೀಡಲಾಗುತ್ತದೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚಿಹ್ನೆಯನ್ನು ಹಂಚಿಕೆ ಮಾಡಲಿದ್ದಾರೆ ಎಂದು ವಿವರಿಸಿದರು.
ಅಂಚೆ ಮತಪತ್ರಗಳ ವಿತರಣೆ: ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ನಂತರ 24ಗಂಟೆಯೊಳಗೆ ಇಟಿಪಿಬಿಎಸ್ ತಂತ್ರಾಂಶದ ಮೂಲಕ ಅಂಚೆ ಮತಪತ್ರಗಳನ್ನು ಆನ್‌ಲೈನ್ ಮುಖಾಂತರ ಕಳುಹಿಸಲಾಗುವುದು. ಜಿಲ್ಲೆಯಲ್ಲಿ 653 ಸೇವಾ ಮತದಾರರಿದ್ದು, ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮತದಾನದ ದಿನದಂದು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ನಮೂನೆ 12ರಲ್ಲಿ ಅರ್ಜಿ ಸಲ್ಲಿಸಿದ್ದು, ಅಂತಹ ಮತದಾರರಿಗೆ ಮತದಾನ ಸಿಬ್ಬಂದಿಗೆ ತರಬೇತಿ ನೀಡುವ ಕೇಂದ್ರದಲ್ಲಿ ಮೇ.2ರಂದು ಅಂಚೆ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗುತ್ತದೆ. 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತದಾರರಿಗೆ ಮನೆ ಮನೆಗೆ ತೆರಳಿ ಮತದಾನ ಮಾಡಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೆಕ್ಟರ್‌ವಾರು ತಂಡ ರಚಿಸಿ ಮೇ 2, 3, 4ರಂದು ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 37,439 ಮತದಾರರಿದ್ದು, ಈ ಪೈಕಿ 2,630 ಮತದಾರರು ಮನೆಯಲ್ಲಿ ಮತ ಚಲಾಯಿಸಲು ಮತಪತ್ರ ಕೋರಿರುತ್ತಾರೆ. ಅಂತೆಯೇ ಜಿಲ್ಲೆಯಲ್ಲಿ 23,068 ಅಂಗವಿಕಲ ಮತದಾರರಿದ್ದು, ಈ ಪೈಕಿ 778 ಅಂಗವಿಕಲ ಮತದಾರರು ಮನೆಯಲ್ಲಿ ಮತ ಚಲಾಯಿಸಲು ಮತಪತ್ರ ಕೋರಿರುತ್ತಾರೆ ಎಂದ ಅವರು, ಮೇ.8ರಿಂದ ಸಂಜೆ 5ಗಂಟೆಯಿಂದ 11ರ ಬೆಳಗ್ಗೆ 10ಗಂಟೆವರೆಗೆ ಹಾಗೂ ಏ.13ರಂದು ಬೆಳಗ್ಗೆ 6ರಿಂದ 14ರ ಬೆಳಗ್ಗೆ 10ಗಂಟೆವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಸಮಯದಲ್ಲಿ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಮುಚ್ಚುವಂತೆ ಹಾಗೂ ಮದ್ಯ ಸಾಗಾಣಿಕೆ, ಶೇಖರಣೆ ನಿಷೇಧಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ತನ್ವೀರ್ ಶೇಖ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಅಬಕಾರಿ ಜಿಲ್ಲಾ ಅಧಿಕಾರಿ ಮಹದೇವಿ ಬಾಯಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಹಾಜರಿದ್ದರು.