ಜಿಲ್ಲೆ

ಹಣದ ವ್ಯವಹಾರದ ನಿಗಾ ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯ: ಜಿಲ್ಲೆಯ 10 ಲಕ್ಷ ರೂಗಿಂತ ಹೆಚ್ಚಿನ ನಗದನ್ನು ಖಾತೆಗೆ ಜಮೆ ಮಾಡುವುದು ಹಾಗೂ ಹಿಂಪಡೆಯುವ ಪ್ರಕರಣಗಳ ಬಗ್ಗೆ ಬ್ಯಾಂಕ್‌ಗಳ ವ್ಯವಸ್ಥಾಪಕರು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಸಂಬಂಧ ಆಯೋಜಿಸಿದ್ದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಖಾತೆಯಿಂದ ೆನ್ ಪೇ, ಗೂಗಲ್ ಪೇ ಸೇರಿದಂತೆ ವಿವಿಧ ಆ್ಯಪ್ ಮೂಲಕ ಐದು ಅಥವಾ ಹೆಚ್ಚಿನ ಖಾತೆಗೆ ಒಂದೇ ಬಾರಿ ಹಣ ವರ್ಗಾವಣೆಯಾಗುವ ಪ್ರಕರಣಗಳನ್ನು ಪಟ್ಟಿ ಮಾಡಿಕೊಂಡು ವರದಿ ಮಾಡಬೇಕು ಎಂದರು.

ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪ್ರತಿದಿನ ಮಾರಾಟವಾಗುವ ಸ್ಟಾಕ್‌ಗಳ ಬಗ್ಗೆ ಗಮನಹರಿಸಬೇಕು. ಅನಧಿಕೃತವಾಗಿ ಮದ್ಯ ಮಾರಾಟವಾಗುವ ಸ್ಥಳಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು. ಇನ್ನು ವಿವಿಧ ಇಲಾಖೆಗಳ ವೆಬ್‌ಸೈಟ್‌ಗಳನ್ನು ಪಟ್ಟಿ ಮಾಡಿಕೊಂಡು ಚುನಾವಣೆ ಘೋಷಣೆಯಾದ ತಕ್ಷಣ ಸಚಿವರು ಹಾಗೂ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಚುನಾವಣೆ ಕೆಲಸಗಳಿಗೆ ಬೇಕಿರುವ ವಿವಿಧ ಪರಿಕರ, ಉಪಕರಣ, ಆಹಾರದ ವ್ಯವಸ್ಥೆಗಳಿಗೆ ಟೆಂಡರ್ ಕರೆದು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಎಸ್‌ಎಸ್‌ಟಿ, ಫ್ಲೈಯಿಂಗ್ ಸ್ಕ್ವಾಡ್ ಜಪ್ತಿ ಮಾಡಿಕೊಳ್ಳುವ ಹಣವನ್ನು ಖಜಾನೆಗೆ ಜಮೆ ಮಾಡುತ್ತಾರೆ. ಇದಕ್ಕೆ ಅಗತ್ಯ ಸಿಬ್ಬಂದಿಯನ್ನು ಖಜಾನೆ ಅಧಿಕಾರಿಗಳು ನಿಯೋಜಿಸಬೇಕು. ಪ್ರಮುಖವಾಗಿ ಚುನಾವಣಾ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಹಣ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡುವ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ, ಮಹಜರ್ ಮಾಡಿ ವರದಿ ಸಂಗ್ರಹಿಸಬೇಕು. ಚುನಾವಣಾ ಆಯೋಗ ತಿಳಿಸುವ ಆ್ಯಪ್‌ಗಳಲ್ಲಿ ನಿಗದಿತ ಸಮಯದಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.