ಜಿಲ್ಲೆ

ಸಿಬ್ಬಂದಿ ನೇಮಕಕ್ಕೆ ಮಾಹಿತಿ ಸಂಗ್ರಹಣೆ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

reportermys

ಮಂಡ್ಯ: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ ಸಿಬ್ಬಂದಿಯನ್ನು ನೇಮಕ ಮಾಡಲು ಎಲ್ಲ ಇಲಾಖೆಯಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್. ಎನ್.ಗೋಪಾಲಕೃಷ್ಣ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನೇಮಕಕ್ಕೆ ಎಷ್ಟು ಸಿಬ್ಬಂದಿ ಲಭ್ಯವಿದ್ದಾರೆ. ಅವರು ಮತದಾನ ಮಾಡುವ ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಕ್ಷೇತ್ರಕ್ಕೆ ನಿಯೋಜಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯ ಪೂರ್ಣ ವಿವರವನ್ನು ಎಚ್‌ಆರ್‌ಎಂಎಸ್ ಮೂಲಕ ಮಾಹಿತಿ ತಿಳಿಸಬೇಕು ಎಂದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಿವೃತ್ತಿಗೆ 6 ತಿಂಗಳು ಇರುವಂತಹವರು, ಗರ್ಭಿಣಿಯರು, ಬಾಣಂತಿಯರು, ಹಾಗೆಯೇ ಅಂಗವಿಕಲರು, ಮಾರಣಾಂತಿಕ ಕಾಯಿಲೆಯಿಂದ ನರಳುವಂತಹ ವ್ಯಕ್ತಿಗಳಿಗೆ ಚುನಾವಣಾ ಕಾರ್ಯದಿಂದ ವಿನಾಯಿತಿ ನೀಡಲು ಅವಕಾಶ ಇರುತ್ತದೆ. ಈ ವಿವರಗಳನ್ನು ಸಹ ನೀಡಬೇಕು. ಚುನಾವಣೆ ಕೆಲಸದಲ್ಲಿ ನಿರತರಾಗುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಂಚೆ ಮತದಾನ ಮಾಡಲು ಗುರುತಿನ ಚೀಟಿಯ ವಿವರದ ಅವಶ್ಯಕತೆ ಇರುತ್ತದೆ. ಈ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮತಗಟ್ಟೆ ಸಿಬ್ಬಂದಿ ಮಾತ್ರವಲ್ಲದೆ ಪೊಲೀಸ್, ಸಾರಿಗೆ, ಆರೋಗ್ಯ, ಪಶುಸಂಗೋಪನೆ ಹಾಗೂ ಇತರ ಇಲಾಖೆಗಳಲ್ಲಿ ಕೆಲಸ ಮಾಡುವವರು ಕೂಡ ಚುನಾವಣಾ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಅವರು ಕೂಡ ಮತದಾನದಿಂದ ವಂಚಿತರಾಗಬಾರದು. ಚುನಾವಣಾ ಕೆಲಸಕ್ಕೆ ನಿಯೋಜನೆಯಾಗುವ ಎಲ್ಲರ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಮುಡಾ ಆಯುಕ್ತೆ ಐಶ್ವರ್ಯಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೆಶಕ ಬಿ.ರಂಗೇಗೌಡ, ಡಿಡಿಪಿಐ ಜವರೇಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ಇತರರಿದ್ದರು.