ಜಿಲ್ಲೆ

ಬರ ಪರಿಸ್ಥಿತಿಯ ನಿಖರ ಮಾಹಿತಿ ಕೊಡಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯ: ಜಿಲ್ಲೆಯ ಏಳು ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರದಿಂದ ಘೋಷಣೆಯಾಗಿದೆ. ಆದ್ದರಿಂದ ಬರಕ್ಕೆ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಿಸಲು ಸರ್ಕಾರದಿಂದ ಸೂಚನೆ ನೀಡಲಾಗಿದ್ದು, ಅದಕ್ಕೆ ತಕ್ಕಂತೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಶುಕ್ರವಾರ ವಿಡಿಯೋ ಸಂವಾದದ ಮೂಲಕ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿಗದಿತ ಸಮಯದೊಳಗೆ ಗ್ರಾಮವಾರು ನೀಡಬೇಕಿದೆ. ಆದ್ದರಿಂದ ಯಾವುದೇ ಲೋಪವಾಗದಂತೆ ವಿವರ ಸಲ್ಲಿಸಬೇಕು ಎಂದರು.

ಬರಪೀಡಿತ ಸಂಬಂಧ ಪರಿಶೀಲಿಸಲು ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಕೇಂದ್ರದ ತಂಡ ಆಗಮಿಸಲಿದೆ. ಅದರಂತೆ ಮಂಡ್ಯ ಜಿಲ್ಲೆಗೂ ಕೂಡ ಕೇಂದ್ರದ ತಂಡ ಭೇಟಿ ನೀಡಿ ಬೆಳೆ ಹಾನಿ ಕುರಿತಂತೆ ಪರಿಶೀಲನೆ ನಡೆಸಲಿದೆ. ಇದಕ್ಕೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕೇಂದ್ರ ತಂಡ ಪರಿಶೀಲನೆಗೆ ಆಗಮಿಸಿದಾಗ ಅವರಿಗೆ ಸರಿಯಾದ ಮಾಹಿತಿಯನ್ನು ಪೂರಕ ಛಾಯಚಿತ್ರಗಳೊಂದಿಗೆ ನೀಡಬೇಕು. ಬೆಳೆ ನಷ್ಟದಲ್ಲಿ ಬಿತ್ತನೆಯಾಗಿ ಮೊಳಕೆ ಒಡೆದು ಒಣಗಿರುವ ಅಥವಾ ನಂತರ ಒಣಗಿರುವ ಬೆಳೆಯನ್ನು ಪರಿಗಣಿಸಬೇಕಾಗುತ್ತದೆ. ಅಧಿಕಾರಿಗಳು ಖುದ್ದು ಸ್ಥಳ ಭೇಟಿ ನೀಡಿ ಮಾಹಿತಿ ಪಡೆದುಕೊಂಡರೆ ಕೇಂದ್ರ ತಂಡದವರಿಗೆ ಮನವರಿಕೆಯಾಗುವ ರೀತಿ ಸಮಸ್ಯೆಗಳನ್ನು ವಿವರಿಸಬಹುದು. ತಹಸೀಲ್ದಾರ್, ಕೃಷಿ, ತೋಟಗಾರಿಕೆ, ರೇಷ್ಮೆ, ಜಿಲ್ಲಾ ಅಂಕಿ ಅಂಶ ಸಂಗ್ರಹಣಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಪೂರಕ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಆರ್.ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ಇತರರಿದ್ದರು.