ಇಂಡಿ ತಾಲೂಕಿನ ಹೊರ್ತಿಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಕೆರೆ ಪರಿಶೀಲಿಸಿದರು. ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಇಂಡಿ ತಹಸೀಲ್ದಾರ್ ವಿಜಯಕುಮಾರ ಕಡಕಭಾವಿ ಮತ್ತಿತರರಿದ್ದಾರೆ.  
ಜಿಲ್ಲೆ

ಹೊರ್ತಿ ಕೆರೆ-ತಡವಲಗಾ ಕಾಲುವೆ ಪರಿಶೀಲಿಸಿದ ಡಿಸಿ ಡಾ.ಆನಂದ ಕೆ, ಬೆಳೆ ಹಾನಿ ಸಮೀಕ್ಷೆ ಬಳಿಕ ಪರಿಹಾರದ ಭರವಸೆ

ವಿಜಯಪುರ: ಕೆರೆ ಮತ್ತು ಕಾಲುವೆಯ ಒಡ್ಡು ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾದ ಹಿನ್ನೆಲೆ ಬುಧವಾರ ಜಿಲ್ಲಾಧಿಕಾರಿ ಡಾ.ಆನಂದ ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂಡಿ ತಾಲೂಕಿನ ಹೊರ್ತಿ ಕೆರೆ ಹಾಗೂ ತಡವಲಗಾ ಕಾಲುವೆಯ ಒಡ್ಡು ಒಡೆದಿತ್ತು. ಇದರಿಂದ ನೀರು ಹರಿದು ಬೆಳೆ ಹಾನಿಯಾಗಿತ್ತಲ್ಲದೇ ಜಮೀನುಗಳ ಮಣ್ಣು ಕೊಚ್ಚಿಕೊಂಡು ಹೋಗಿತ್ತು. ಜಮೀನುಗಳ ಒಡ್ಡು ಸಹ ಒಡೆದಿತ್ತು. ಹೀಗಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಅ. 2 ರಂದು ಹೆಚ್ಚಿನ ಪ್ರಮಾಣದ ಏರಿಯ ಕುಸಿತ ಕಂಡ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಹಾನಿ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಕೆರೆಯ ಕೋಡಿಯಿಂದ ಸುಮಾರು 30 ಮೀಟರ್ ದೂರದಲ್ಲಿ ಹಾಗೂ ಕುಸಿತ ಕಂಡುಬಂದ ಸ್ಥಳದಿಂದ 50 ಮೀಟರ್ ಅಂತರದಲ್ಲಿ ಕ್ರಮೇಣವಾಗಿ ನೀರನ್ನು ಹೊರಗೆ ಹಾಕಲು ಕೃತಕವಾಗಿ ಕೆರೆಯ ಏರಿಯಲ್ಲಿ ಚಾನಲ್ ನಿರ್ಮಾಣ ಮಾಡಿ ಈಗಾಗಲೇ ಹಂತ ಹಂತವಾಗಿ ನೀರನ್ನು ಹೊರಹಾಕಲಾಗಿದೆ. ಕುಸಿತ ಕಂಡ ಹೊರ್ತಿ ಕೆರೆ ದುರಸ್ತಿಗೆ ಸಂಬಂಧಿಸಿದಂತೆ ಸೂಕ್ತ ಕ್ರೀಯಾಯೋಜನೆಯನ್ನು ಸಿದ್ಧಪಡಿಸಿಕೊಂಡು ದುರಸ್ತಿ ಕಾಮಗಾರಿ ಕೈಗೊಂಡು ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಇಂಡಿ ತಹಸೀಲ್ದಾರ್ ವಿಜಯಕುಮಾರ ಕಡಕಭಾವಿ, ಇಂಡಿ ಉಪ ವಿಭಾಗದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂದೀಪಕುಮಾರ, ಕೆಬಿಜೆಎನ್‌ಎಲ್ ಕಾರ್ಯನಿರ್ವಾಹಕ ಅಭಿಯಂತರ ಸೋನಾವಣೆ ಮತ್ತಿತರರಿದ್ದರು.