ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಜಿಲ್ಲೆಯಲ್ಲಿ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಿದ್ದು, ಮಿಂಚಿನ ನೋಂದಣಿ ಸಂಬಂಧ ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು ಶನಿವಾರ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಅನಿರೀಕ್ಷಿತ ಭೇಟಿ ಭೇಟಿ ನೀಡಿ ಬೂತ್‌ಮಟ್ಟದ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಿದರು.
ಇದೇ ವೇಳೆ ತಹಶೀಲ್ದಾರ್, ಬಿಎಲ್‌ಒ ಅಧಿಕಾರಿಗಳೊಂದಿಗೆ ಮನೆ ಮನೆಗೆ ಭೇಟಿ ನೀಡಿ ಯುವ ಮತದಾರರ ಕುರಿತು ಮಾಹಿತಿ ಪಡೆಯಲು ಮುಂದಾದರು. 18 ವರ್ಷ ಪೂರ್ಣಗೊಂಡವರಿಗೆ ಅವಕಾಶ ಕಲ್ಪಿಸಲಾಗಿದ್ದು, ತಪ್ಪದೇ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಸೂಚನೆ ನೀಡಿದರು. ಮಲ್ಲನಕಟ್ಟೆ, ನಗರದ ವಿ.ಪಿ. ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿ ವಿವಿಧ ಮತಗಟ್ಟೆಗಳಿಗೆ ತೆರಳಿ ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿದ ಅವರು, ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಫೋಟೊ ಬದಲಾವಣೆ ಹೀಗೆ ವಿವಿಧ ಪರಿಷ್ಕರಣೆ ಕೈಗೊಳ್ಳಲು ಮತದಾರರಿಗೆ ಡಿ. 8ರವರೆಗೂ ಕಾಲಾವಕಾಶವಿದೆ. ಈಗಾಗಲೇ ನೋಂದಾಯಿಸಿಕೊಂಡವರು ಪಟ್ಟಿಯಲ್ಲಿ ಹೆಸರಿದೆಯೇ, ಏನಾದರೂ ತಪ್ಪಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜನಸಂಖ್ಯೆ ಆಧಾರದ ಮೇಲೆ ಶೇ 70ರಷ್ಟು ಜನ 18 ವರ್ಷಕ್ಕೂ ಮೇಲ್ಪಟ್ಟವರೇ ಆಗಿರುತ್ತಾರೆ. ಇವರೆಲ್ಲರೂ ಪಟ್ಟಿಗೆ ಸೇರ್ಪಡೆಯಾಗಬೇಕು. ಅರ್ಹರು ವಂಚಿತರಾಗದಂತೆ ಎಚ್ಚರವಹಿಸಬೇಕು. ಅದಕ್ಕಾಗಿ ಪ್ರತಿ ಗ್ರಾಮಗಳಲ್ಲೂ ಇದೇ ರೀತಿ ಮಾಡಿದರೆ, ಚುನಾವಣೆ ಸಮಯದಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ. ಅಲ್ಲದೆ, ಅಕ್ರಮ ಮತದಾನ ತಡೆಗಟ್ಟಬಹುದು ಎಂದು ಬಿಎಲ್‌ಒಗಳಿಗೆ ಸೂಚಿಸಿದರು.
ಸಂದೇಹ ನಿವಾರಣೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲ್ಲಿ 08194-222176 ಸಹಾಯವಾಣಿ ಸ್ಥಾಪಿಸಲಾಗಿದೆ. ಇದಕ್ಕೆ ಕರೆ ಮಾಡಿ ಬಗೆಹರಿಸಿಕೊಳ್ಳಬಹುದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅವರು ಕೂಡ ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕಿನ ಘಟ್ಟಿಹೊಸಹಳ್ಳಿ, ಸೇವಾನಗರ, ಜಾನಕಲ್, ಕಂಠಾಪುರ ನರಸೀಪುರ, ಅಕ್ಕಿತಿಮ್ಮನಹಟ್ಟಿ ಹೊನ್ನೇನಹಳ್ಳಿ, ಯಾಲಕ್ಕಪ್ಪನಹಟ್ಟಿ, ಮಧುರೆ, ದೇವಿಗೆರೆ, ಬೀಸನಹಳ್ಳಿ, ಮಾವಿನಕಟ್ಟೆ ಸೇರಿ ಇತರೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಹಶೀಲ್ದಾರ್‌ಗಳಾದ ಸತ್ಯನಾರಾಯಣ, ಮಲ್ಲಿಕಾರ್ಜುನ್ ಇತರರಿದ್ದರು.
ಪರಶುರಾಮಪುರ
ಸರ್ಕಾರದ ನಿರ್ದೇಶನದಂತೆ ಬಿಎಲ್‌ಒಗಳು ಜನವಸತಿ ಪ್ರದೇಶದ ನಿವಾಸಿಗಳ ಮನೆಗಳಿಗೆ ನೇರವಾಗಿ ಭೇಟಿ ನೀಡಿ ಮತಪರಿಷ್ಕರಣೆ ಕೈಗೊಳ್ಳಬೇಕು ಎಂದು ಚಳ್ಳಕೆರೆ ಬಿಇಒ ಕೆ ಎಸ್ ಸುರೇಶ ಹೇಳಿದರು
ಸಮೀಪದ ದೇವರಮರಿಕುಂಟೆ ಗ್ರಾಮದ ಜನವಸತಿ ಪ್ರದೇಶಕ್ಕೆ ಶನಿವಾರ ಕಂದಾಯ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಅಲ್ಲಿನ ಮತಗಟ್ಟೆ ಅಧಿಕಾರಿಗಳ (ಬಿಎಲ್‌ಒ) ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮಾತನಾಡಿದರು
ಮುಂಬರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಸರ್ಕಾರ ಮತದಾರರ ಪಟ್ಟಿಯ ಸಿಧ್ದತೆಗೆ ಪೂರಕವಾಗಿ ಈಗ ಸಮಗ್ರ ಪರಿಷ್ಕರಣೆ ಕೈಗೊಳ್ಳುತ್ತಿದೆ ಶಿಕ್ಷಣ ಇಲಾಖೆಯ ಸಿಬ್ಬಂದಿಯವರೇ ಹೆಚ್ಚು ಈ ಕಾರ್ಯದಲ್ಲಿ ತೊಡಗಿದ್ದು ತಮ್ಮ ಶಾಲಾ ಕರ್ತವ್ಯದ ಜತೆ ಜತೆಯಲ್ಲೇ ಶಾಲಾ ವಸತಿ ಪ್ರದೇಶಕ್ಕೆ ನಿಯಮಿತವಾಗಿ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು
ಚಳ್ಳಕೆರೆ ತಾಲೂಕು ತಹಸೀಲ್ದಾರ್ ಎನ್ ರಘುಮೂರ್ತಿ ಮತಪರಿಷ್ಕರಣೆಯ ವಿವಿಧ ನಮೂನೆಗಳನ್ನು ಪರಿಶೀಲಿಸಿ ಮಾತನಾಡಿ ಮತಗಟ್ಟೆ ಅಧಿಕಾರಿಗಳು ಸರ್ಕಾರ ನಿಗಧಿಪಡಿಸಿದ ವೇಳಾಪಟ್ಟಿಯನ್ನು ಚಾಚೂ ತಪ್ಪದೇ ಅನುಸರಿಸಿ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ಮರಣ ಹೊಂದಿರುವವರನ್ನು ತೆಗೆಯುವ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದೇ ಕರ್ತವ್ಯ ನಿರ್ವಹಿಸಬೇಕು ಸಮಸ್ಯೆಗಳಾದರೆ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು
ಇದೇ ವೇಳೆ ಬಿಎಲ್‌ಒಗಳೊಂದಿಗೆ ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರಿಗೆ ಮತಪರಿಷ್ಕರಣೆ ಕುರಿತ ಜಾಗೃತಿ ಮೂಡಿಸಿದರು
ಸಂದರ್ಭದಲ್ಲಿ ಸಿಆರ್‌ಪಿ ಎಸ್ ವಿಷ್ಣುವರ್ಧನ, ಮತಗಟ್ಟೆ ಅಧಿಕಾರಿಗಳಾದ ಎನ್ ಚಿತ್ತಯ್ಯ, ಟಿ ಡಿ ಬಸವರಾಜು, ಗ್ರಾಮಸ್ಥರಾದ ಎ ಅಜಿತ್, ವಿ ಪ್ರಿಯಾಂಕ, ಓಬಳೇಶ, ಗುರುಲಿಂಗಮ್ಮ ತಿಪ್ಪೇಸ್ವಾಮಿ, ರಾಜಣ್ಣ, ಕಂದಾಯ ಮತ್ತು ಶಿಕ್ಷಣ ಇಲಾಖೆಯ ಅನುಷ್ಟಾನಾಧಿಕಾರಿಗಳು ಗ್ರಾಮಸ್ಥರು ಇದ್ದರು