ಮುಳಬಾಗಿಲಿನಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಸೈಕಲ್​ ಸವಾರಿ ನಡೆಸಿ ಸ್ವಚ್ಛತೆ ಅವಲೋಕಿಸಿದರು. ತಹಸೀಲ್ದಾರ್​ ವಿ.ಗೀತಾ, ತಾಪಂ ಇಒ ಡಾ.ಕೆ. ಸರ್ವೇಶ್​, ನಗರಸಭೆ ಪೌರಾಯುಕ್ತ ವಿ.ಶ್ರೀಧರ್​ , ಕೋಲಾರ ಜಿಲ್ಲಾ ಯೋಜನಾ ನಿರ್ದೇಶಕಿ ಅಂಬಿಕಾ ಇದ್ದರು. 
ಜಿಲ್ಲೆ

ಮುಳಬಾಗಿಲಿನಲ್ಲಿ ಡಿಸಿ ಸೈಕಲ್​ ರೌಂಡ್ಸ್​

ಕೋಲಾರ ಡೆಸ್ಕ್

ನಗರದ ಸ್ವಚ್ಛತೆ ಪರಿಶೀಲನೆ - ದೇವಾಲಯ ಸುತ್ತ ಹೋಟೆಲ್​ಗಳ ತೆರವಿಗೆ ಸೂಚನೆ

ಮುಳಬಾಗಿಲು : ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಭಾನುವಾರ ಬೆಳ್ಳಂಬೆಳಗ್ಗೆ ಮುಳಬಾಗಿಲಿಗೆ ಆಗಮಿಸಿ ನಗರಸಭೆ ಕಾರ್ಯಾಲಯದ ಪರಿಸರದ ಸ್ವಚ್ಛತೆ ಪರಿಶೀಲಿಸಿ, ನಂತರ ಸೈಕಲ್​ನಲ್ಲೇ ನಗರ ಸಂಚಾರ ಮಾಡಿ ಸಮಸ್ಯೆಗಳನ್ನು ಅವಲೋಕಿಸಿದರು.

ಮುಳಬಾಗಿಲಿಗೆ ಜಿಲ್ಲಾಧಿಕಾರಿ ಭೇಟಿ ಕಾರ್ಯಕ್ರಮ ನಿಗದಿಯಾಗುತ್ತಿದ್ದಂತೆ ನಗರಸಭೆಯಿಂದ ಬೆಳಗ್ಗೆ, ಸಂಜೆ ಎರಡು ಪಾಳೆಯಲ್ಲೂ ಸ್ವಚ್ಛತೆ ಕಾರ್ಯಗಳು ಆರಂಭಗೊಂಡಿದ್ದು, ನಗರದ ಬಸ್​ ನಿಲ್ದಾಣ ರಸ್ತೆ, ತಾಲೂಕು ಕಚೇರಿ ರಸ್ತೆ, ಎಂ.ಸಿ.ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳಿಗೆ ಶನಿವಾರ ಬೆಳಗ್ಗೆ ಪಿಡಬ್ಲ್ಯುಡಿ ಇಲಾಖೆಯಿಂದ ಜೆಲ್ಲಿ ಮಿಶ್ರಿತ ಧೂಳು ಹಾಕಿ ಸಮತಟ್ಟು ಮಾಡಿ ಡಿಸಿ ಅವರ ಸೈಕಲ್​ ಯಾತ್ರೆ ಸುಗಮವಾಗಿ ಸಾಗುವಂತೆ ನೋಡಿಕೊಂಡಿದ್ದು ಕಂಡು ಬಂತು. ಈ ಮೂಲಕ ಒಂದು ವಾರದ ಮಟ್ಟಿಗೆ ಹಳ್ಳಗಳ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಂತಾಗಿದೆ.

ಭಾನುವಾರ ಬೆಳಗ್ಗೆ ಅಂಬೇಡ್ಕರ್​ ವೃತ್ತದಿಂದ ಸೈಕಲ್​ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಚಾಚಾ ನೆಹರು ಉದ್ಯಾನವನಕ್ಕೆ ಭೇಟಿ ನೀಡಿ ಬೆಳಗ್ಗೆ ವಾಯುವಿಹಾರಿಗಳ ಜತೆಗೆ ಕೆಲಕಾಲ ಉದ್ಯಾನವನ ಸ್ವಚ್ಛತೆ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಿದರು.

ಸೈಕಲ್​ ಜಾಥಾ ಮೂಲಕ ಸ್ವಚ್ಛತಾ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಜಿಲ್ಲಾಧಿಕಾರಿ ಡಾ.ರವಿ ಮಾತನಾಡಿ, ಮುಳಬಾಗಿಲು ನಗರ ಬಹುತೇಕ ಸ್ವಚ್ಛವಾಗಿದೆ. ಈ ಬಗ್ಗೆ ನಗರಸಭೆಯ ಪಾತ್ರ ಶ್ಲಾಘನೀಯ ಹಾಗೂ ಸಮಾಧಾನ ತಂದಿದೆ. ಕೆಲ ಸ್ಥಳಗಳಲ್ಲಿ ಸ್ವಚ್ಛತೆಯ ಅಗತ್ಯವಿದೆ. ಇದರಲ್ಲಿ ಸಾರ್ವಜನಿಕರು ಸಹ ನಗರಸಭೆಯ ಜತೆ ಕೈ ಜೋಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಇಂಜಿನಿಯರ್​ ಶ್ರೀನಿವಾಸ್​, ಸಹಾಯಕ ಕಾರ್ಯಪಾಲಕ ಇಂಜಿನಿಯರ್​ ವೆಂಕಟಾಚಲಪತಿ, ಕಂದಾಯ ಅಧಿಕಾರಿ ನಾರಾಯಣ, ಪರಿಸರ ಇಂಜಿನಿಯರ್​ ಮಹೇಶ್​, ಹಿರಿಯ ಆರೋಗ್ಯ ನಿರೀಕ್ಷಕಿ ವಿ.ಪ್ರತಿಭಾ ಇದ್ದರು.

ಕಟ್ಟುನಿಟ್ಟಿನ ಸೂಚನೆ -ಆಂಜನೇಯ ಸ್ವಾಮಿ ದೇವಾಲಯದ ಸುತ್ತಮುತ್ತಲ ಪರಿಸರಕ್ಕೆ ಧಕ್ಕೆ ಆಗುವಂತಹ ಅಂಗಡಿ ಮುಂಗಟ್ಟುಗಳು ಹೋಟೆಲ್​ಗಳು ಇರಬಾರದು. ಭಕ್ತರಿಗೆ ಸಂಬಂಧಿಸಿದ ಪೂಜಾ ಸಾಮಗ್ರಿಗಳು ಮತ್ತು ವಸ್ತುಗಳ ಮಾರಾಟಕ್ಕೆ ಅವಕಾಶ ಇರಬೇಕು. -ಅಗ್ರಹಾರದ ವಿಠಲಕುಂಟೆ ಅಭಿವೃದ್ಧಿ ಬಗ್ಗೆ ರ್ನಿಲಕ್ಷ$್ಯ ವಹಿಸಿರುವುದು ಸರಿಯಲ್ಲ. ತಕ್ಷಣ ನಗರಸಭೆಯಿಂದ ಸರಿಪಡಿಸಬೇಕು ಎಂದು ಸೂಚಿಸಿದರು. -ಸಾರ್ವಜನಿಕ ಸ್ಥಳಗಳು, ಬಸ್​ ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಗೃಹಗಳು ಇರಬೇಕು. ಇದನ್ನು ನಗರಸಭೆ ತಕ್ಷಣ ಅನುಷ್ಠಾನಕ್ಕೆ ತರಬೇಕು ಎಂದು ನಿರ್ದೇಶಿಸಿದರು. -ನಗರದಲ್ಲಿ ಸಿಸಿ ಕ್ಯಾಮರಾಗಳ ಕಾರ್ಯಾಚರಣೆ ಸಕ್ರಮವಾಗಿರಬೇಕು. ಅವಶ್ಯ ಇರುವೆಡೆ ಅಳವಡಿಸಬೇಕು. ಸಿಗ್ನಲ್​ ದೀಪಗಳು ಚಾಲನೆಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.