ಕಳೆದ 6-7 ವರ್ಷಗಳಿಂದ ಕಾಮಗಾರಿ ಅರ್ಧಕ್ಕೆ ನಿಂತು ಪಾಳುಬಿದ್ದ ಸ್ಥಿತಿಯಲ್ಲಿದ್ದ ದ.ಕ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಾಮಗಾರಿ ಮತ್ತೆ ಪುನರಾರಂಭಗೊಂಡಿದೆ.  
ಜಿಲ್ಲೆ

3 ತಿಂಗಳಲ್ಲಿ ಡಿಸಿ ಕಾಂಪ್ಲೆಕ್ಸ್ ರೆಡಿ!, ಮುಖ್ಯ ಮಂತ್ರಿಗಳಿಂದ ಉದ್ಘಾಟನೆಗೆ ಸಿದ್ದತೆ, ಸ್ಮಾರ್ಟ್‌ಸಿಟಿ ಡೆಪಾಸಿಟ್ ಕಾಂಟ್ರಿಬ್ಯೂಷನ್ ಮೂಲಕ 20 ಕೋ.ರೂ ವೆಚ್ಚದಲ್ಲಿ ಉಳಿಕೆ ಕಾಮಗಾರಿ ಆರಂಭ

Mangaluru - Shravan Kumar Nala

ಶ್ರವಣ್‌ಕುಮಾರ್ ನಾಳ, ಮಂಗಳೂರು

ಕಳೆದ 6-7 ವರ್ಷಗಳಿಂದ ಕಾಮಗಾರಿ ಅರ್ಧಕ್ಕೆ ನಿಂತು ಪಾಳುಬಿದ್ದ ಸ್ಥಿತಿಯಲ್ಲಿದ್ದ ದ.ಕ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಾಮಗಾರಿ ಮತ್ತೆ ಪುನರಾರಂಭಗೊಂಡಿದೆ. ಜಿಲ್ಲಾಡಳಿತದ ಮಾಹಿತಿಯಂತೆ ಮುಂದಿನ 90 ದಿನದೊಳಗೆ ಡಿಸಿ ಕಾಂಪ್ಲೆಕ್ಸ್ ಕಾಮಗಾರಿ ಪೂರ್ಣಗೊಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕೈಯಿಂದಲೇ ಲೋಕಾರ್ಪಣೆಗೊಳಿಸಲು ಸಿದ್ದತೆ ನಡೆಯುತ್ತಿದೆ.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭ ಈ ಡಿಸಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದ್ದು, ನಂತರ ಕಾಮಗಾರಿ ಹಿನ್ನಡೆಗೆ ಅನುದಾನ ಕೊರತೆ ಪ್ರಮುಖ ಕಾರಣ. ಸಂಕೀರ್ಣದ ಒಂದು ಹಂತದ ಕಾಮಗಾರಿ. ಈಗಾಗಲೇ ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿ ಬಾಕಿ ಇದೆ. ಎರಡನೇ ಹಂತವನ್ನು ಪೂರ್ಣಗೊಳಿಸಲು ಅಂದಾಜಿನ ಪ್ರಕಾರ ಸುಮಾರು 32 ಕೋ.ರೂ.ಗಳ ಅಗತ್ಯವಿದೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಅಂತಿಮವಾಗಿ ಸರ್ಕಾರದ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದು ಮಂಗಳೂರು ಸ್ಮಾರ್ಟ್ ಸಿಟಿ ಸಹಕಾರದಿಂದ ಸುಮಾರು 20 ಕೋ.ರೂ ವೆಚ್ಚದಲ್ಲಿ ಉಳಿಕೆ ಕಾಮಗಾರಿ ಯೋಜನೆಯನ್ನುಜಿಲ್ಲಾಡಳಿತ ಕೈಗೆತ್ತಿಕೊಂಡಿದೆ.

*ಸ್ಮಾರ್ಟ್‌ಸಿಟಿ ಡೆಪಾಸಿಟ್ ಕಾಂಟ್ರಿಬ್ಯೂಷನ್ ಯೋಜನೆ

2014ರಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿತ್ತು. ಅರಣ್ಯ ಇಲಾಖೆ ಜಾಗದ ಹಸ್ತಾಂತರ ಹಾಗೂ ಮರ ಕಡಿಯುವ ವಿರುದ್ಧ ತಡೆಯಾಜ್ಞೆ ಇದ್ದುದರಿಂದ ಚೆನ್ನೈಯ ಗ್ರೀನ್ ಟ್ರಿಬ್ಯೂನಲ್‌ನಲ್ಲಿ ವ್ಯಾಜ್ಯ ಮುಗಿದು, 2018ರ ಮಾರ್ಚ್‌ನಲ್ಲಿ ಗೃಹ ನಿರ್ಮಾಣ ಮಂಡಳಿ ಕಾಮಗಾರಿ ಆರಂಭಿಸಿತ್ತು. ನಂತರ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಇಡೀ ಕಟ್ಟಡ ಪಾಳುಬಿದ್ದಿತ್ತು. ಸ್ಮಾರ್ಟ್‌ಸಿಟಿ ಡೆಪಾಸಿಟ್ ಕಾಂಟ್ರಿಬ್ಯೂಷನ್ ಹೆಸರಿನಲ್ಲಿ ಸ್ಮಾರ್ಟ್ ಸಿಟಿ 20 ಕೋ.ರೂ. ವೆಚ್ಚದಲ್ಲಿ ಉಳಿಕೆ ಯೋಜನೆ ಪೂರ್ಣಗೊಳಿಸಲು ನಿರ್ದರಿಸಿದ್ದು, ಇದರಲ್ಲಿ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಟ್ಟಡಕ್ಕೆ ಕಲ್ಪಿಸಲಾಗುತ್ತದೆ. ಮುಖ್ಯವಾಗಿ ಸುಸಜ್ಜಿತ ಆವರಣಗೋಡೆ, ಯಾರ್ಡ್, ಪ್ಲೋರಿಂಗ್, ಡಿಸಿ ಕಚೇರಿಗೆ ಸಂಬಂಧಿಸಿದ ಪೀಠೋಪಕರಣಗಳು, ಸಭಾಂಗಣದ ವಿನ್ಯಾಸ, ಪೈಂಟಿಂಗ್, ಇಲೆಕ್ಟಿಕಲ್- ಕೇಬಲ್ ನೆಟ್ವರ್ಕ್ ಮೊದಲಾದ ಕೆಲಸಗಳು ಭರದಿಂದ ನಡೆಯುತ್ತಿದೆ.

---------------

ಅಂದಾಜು ಪಟ್ಟಿ ಪದೇ ಪದೇ ಹೆಚ್ಚಳ

2018ರಲ್ಲಿ ಅಂದಿನ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮತ್ತು ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಂಕೀರ್ಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಅವರು, 2.26 ಲಕ್ಷ ಚದರ ಅಡಿ ಪ್ರದೇಶದಲ್ಲಿ 41 ಕೋಟಿ ರೂ ವೆಚ್ಚದಲ್ಲಿ ಡೀಸಿ ಕಚೇರಿ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆಕರ್ಷಕ ಪಾರಂಪರಿಕ ಶೈಲಿ ಕಟ್ಟಡ ನಿರ್ಮಿಸಲು ಆರಂಭದಲ್ಲಿ 41 ಕೋಟಿ ರೂ. ಮೊತ್ತದ ಯೋಜನೆಯಿದ್ದರೂ ನಂತರ 55 ಕೋಟಿಗೆ ಹೆಚ್ಚಿಸಲಾಯಿತು. 2019ರ ಸೆ.16ಕ್ಕೆ ಪ್ರಥಮ ಹಂತದ ಕಾಮಗಾರಿ ಮುಗಿಯಬೇಕಿತ್ತು. ಒಂದನೇ ಹಂತದ 55 ಕೋಟಿ ರೂ. ಮೊತ್ತದಲ್ಲಿ ಗುತ್ತಿಗೆದಾರರಿಗೆ 51 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಬದಲಾದ ಪರಿಸ್ಥಿಯಲ್ಲಿ ಒಟ್ಟು ಯೋಜನಾ ವೆಚ್ಚ 76 ಕೋಟಿ ರೂ. ತಲುಪಿತ್ತು. ಯೋಜನೆ ಪೂರ್ಣಗೊಳಿಸಲು ಎರಡನೇ ಹಂತದಲ್ಲಿ 29 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ, 4 ವರ್ಷದ ಹಿಂದೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

-----------------

ಮುಖ್ಯ ಮಂತ್ರಿಗಳಿಂದ ಉದ್ಘಾಟನೆಗೆ ಸಿದ್ದತೆ

ಕರಾವಳಿಯ ಪಾರಂಪರಿಕ ಶೈಲಿಯಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, 5.8 ಎಕರೆ ಜಾಗದಲ್ಲಿ 2.26 ಲಕ್ಷ ಚದರ ಅಡಿಯ ಮೂರು ಮಹಡಿಗಳ ಕಟ್ಟಡ ನಿರ್ಮಿಸಲಾಗುತ್ತಿದೆ. ಕಂದಾಯ ಇಲಾಖೆ ಸಹಿತ 38 ಇಲಾಖೆಗಳಿಗೆ ಕಚೇರಿ ನಿರ್ಮಿಸಲಾಗುತ್ತಿದೆ. ನೆಲ ಅಂತಸ್ತಿನಲ್ಲಿ 400 ಮಂದಿ ಕುಳಿತುಕೊಳ್ಳಬಹುದಾದ ಸಾಮರ್ಥ್ಯದ ಸಭಾಂಗಣ, ಎರಡನೇ ಮಹಡಿಯಲ್ಲಿ ಎರಡು ಮೀಟಿಂಗ್ ಹಾಲ್, ಡಿಸಿ ಕೋರ್ಟ್ ಹಾಲ್, ಸಂಸದ, ಸಚಿವ, ಶಾಸಕರ ಕಚೇರಿ ಇರಲಿದೆ. 175ರಿಂದ 200 ವಾಹನ ನಿಲುಗಡೆಗೆ ವ್ಯವಸ್ಥೆ ಈ ಕಟ್ಟಡದಲ್ಲಿರಲಿದೆ. ಉಳಿಕೆ ಕಾಮಗಾರಿ ಬರದಿಂದ ಸಾಗುತ್ತಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಕಟ್ಟಡ ಲೋಕಾರ್ಪಣೆಗೊಳಿಸಲು ಸಿದ್ದತೆ ನಡೆಯುತ್ತಿದೆ.

-----------------

ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸ್ಮಾರ್ಟ್ ಸಿಟಿಯ ಸಹಕಾರ ಕೋರಿದ್ದು, ಈಗಾಗಲೇ ಮಾತುಕತೆಗಳು ನಡೆದು ಸ್ಮಾರ್ಟ್ ಸಿಟಿ ವತಿಯಿಂದ 20 ಕೋ.ರೂ. ಮೊತ್ತವನ್ನು ’ಡೆಪಾಸಿಟ್ ಕಾಂಟ್ರಿಬ್ಯೂಶನ್’ ಎಂದು ಯೋಜನೆಗೆ ಒದಗಿಸಲು ಉದ್ದೇಶಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ.

ದಿನೇಶ್ ಗುಂಡುರಾವ್, ಉಸ್ತುವಾರಿ ಸಚೀವರು, ದ.ಕ ಜಿಲ್ಲೆ