ಜಿಲ್ಲೆ

ಪಿಯು ಪರೀಕ್ಷಾ ಕೇಂದ್ರಗಳ ಮೇಲೆ ಡಿಸಿ, ಸಿಇಒ ವೆಬ್​ಕಾಸ್ಟಿಂಗ್​

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜಿಲ್ಲೆಯಲ್ಲಿ ಮಾರ್ಚ್​ 1 ರಿಂದ 20ರವರೆಗೆ ನಡೆಯಲಿರುವ ದ್ವೀತಿಯ ಪಿಯುಸಿ ಪರೀಕ್ಷೆಗೆ 25,768 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಪರೀಕ್ಷೆ ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಬಾರಿ ಪ್ರತಿ ಪರೀಾ ಕೇಂದ್ರದ ಚಟುವಟಿಕೆಗಳನ್ನು ಜಿಲ್ಲಾಡಳಿತದ ಕಚೇರಿ ಹಾಗೂ ಜಿಪಂ ಸಿಇಒ ಕಚೇರಿಯಲ್ಲಿ ವೆಬ್​ಕಾಸ್ಟಿಂಗ್​ ಮೂಲಕ ನಿಗಾವಹಿಸಲಾಗುವುದು.

ಜಿಲ್ಲಾಕೇಂದ್ರ ಸೇರಿದಂತೆ 35 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜಿಲ್ಲೆಯ ತುಮಕೂರು ತಾಲೂಕಿನಲ್ಲಿ 13, ಕೊರಟಗೆರೆ -1, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಮಧುಗಿರಿ ತಾಲೂಕಿನಲ್ಲಿ ತಲಾ 2, ಕುಣಿಗಲ್​, ತಿಪಟೂರು, ಪಾವಗಡ ತಾಲೂಕಿನಲ್ಲಿ ತಲಾ 3, ಶಿರಾ ತಾಲೂಕಿನಲ್ಲಿ 4 ಪರೀಕ್ಷೆ ಕೇಂದ್ರಗಳಿರಲಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸಾಕಷ್ಟು ಗಾಳಿ, ಬೆಳಕು ಇರುವ ಕೊಠಡಿಗಳು, ಉತ್ತಮ ರೀತಿಯ ಪೀಠೋಪಕರಣ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯ, ಆರೋಗ್ಯ ಸೇವೆ ಒದಗಿಸಲು ಜಿಲ್ಲಾಡಳಿತ ಕ್ರಮವಹಿಸಿದೆ.

ತ್ರಿಸದಸ್ಯ ತಂಡ : ಜಿಲ್ಲಾ ಖಜಾನೆ ಮತ್ತು ಮಧುಗಿರಿ ಉಪ ಖಜಾನೆಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಭದ್ರವಾಗಿಡಲಿದ್ದು ಸುಸ್ಥಿತಿಯಲ್ಲಿರುವ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಬಯೋಮೆಟ್ರಿಕ್​ ವ್ಯವಸ್ಥೆ ಕಲ್ಪಿಸಿ ಅವುಗಳ ನಿರ್ವಹಣೆ ಮಾಡಲಾಗುವುದು. ಪರೀಕ್ಷೆಗೆ ಸಂಬಂಧಿಸಿದ ಗೌಪ್ಯ ವಸ್ತುಗಳ ಸಾಗಾಣಿಕೆ ಮಾಡುವ ವಾಹನಗಳಿಗೆ ಜಿಪಿಎಸ್​ ಉಪಕರಣ ಅಳವಡಿಸಲಾಗುವುದು. ಜಿಲ್ಲಾ ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಠೇವಣಿಸಲು ಹಾಗೂ ವಿತರಿಸಲು ಅಪರ ಜಿಲ್ಲಾಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಜಿಲ್ಲಾ ಖಜಾನೆ ಉಪನಿರ್ದೇಶಕರನ್ನೊಳಗೊಂಡ ತ್ರಿಸದಸ್ಯ ತಂಡವನ್ನು ರಚಿಸಲಾಗಿದೆ.

25768 ವಿದ್ಯಾರ್ಥಿಗಳು

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 24,378 ಹೊಸ ವಿದ್ಯಾರ್ಥಿಗಳು, 318 ಪುನರಾವರ್ತಿತ, 1067 ಖಾಸಗಿ ಹಾಗೂ 5 ಫಲಿತಾಂಶ ಸುಧಾರಣೆ ವಿದ್ಯಾರ್ಥಿಗಳು ಸೇರಿ ಒಟ್ಟು 25,768 ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 9088 ವಿಜ್ಞಾನ, 10217 ವಾಣಿಜ್ಯ ಹಾಗೂ 5977 ಕಲಾ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಸಭೆಗೆ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಡಾ.ಬಾಲ ಗುರುಮೂರ್ತಿ ಮಾಹಿತಿ ನೀಡಿದರು.

ಮೊಬೈಲ್​, ಬ್ಲೂಟೂತ್​ ಬ್ಯಾನ್​

ಮೊಬೈಲ್​ ಫೋನ್​, ಡಿಜಿಟಲ್​ ವಾಚ್​, ರಿಸ್ಟ್​ವಾಚ್​, ಬ್ಲೂಟೂತ್​ ಸೇರಿದಂತೆ ವಿದ್ಯುನ್ಮಾನ ಸಾಧನಗಳನ್ನು ಪರೀಕ್ಷಾ ಕೊಠಡಿಗೆ ತರಲು ರ್ನಿಬಂಧಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆಯಿರುವ ಬಗೆ ದೃಢಪಡಿಸಿಕೊಳ್ಳಬೇಕು. ಪ್ರತಿ ಕೇಂದ್ರದ ಚಟುವಟಿಕೆಗಳನ್ನು ಜಿಲ್ಲಾಡಳಿತದ ಕಚೇರಿ ಹಾಗೂ ಜಿಪಂ ಸಿಇಒ ಕಚೇರಿಯಲ್ಲಿ ವೆಬ್​ಕಾಸ್ಟಿಂಗ್​ ಮೂಲಕ ನಿಗಾವಹಿಸಲಾಗುವುದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಾವುದೇ ಲೋಪದೋಷಗಳಿಲ್ಲದಂತೆ ಶಾಂತಿಯುತವಾಗಿ ಪರೀಕ್ಷೆ ನಡೆಸಲು ಕ್ರಮವಹಿಸಲು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಗುರುವಾರ ಸೂಚಿಸಿದರು.

ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್​.ಮಧುಬಂಗಾರಪ್ಪ ಅವರು ಪಿಯುಸಿ ಪರೀಕ್ಷೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್​ ಸಭೆಯಲ್ಲಿ ಭಾಗವಹಿಸಿದ ಶುಭಕಲ್ಯಾಣ್​, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್​ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು ಎಂದರು.

ಈ ವೇಳೆ ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ, ಡಿಡಿಪಿಯು ಬಾಲಗುರುಮೂರ್ತಿ ಮತ್ತಿತರರು ಇದ್ದರು.