ಜಿಲ್ಲೆ

ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ಆಪರೇಷನ್ ಸೌಲಭ್ಯ ಸದುಪಯೋಗಕ್ಕೆ ಕರೆ

Gadag - Shivanand Hiremath

ಗದಗ: ಗಜೇಂದ್ರಗಡ  ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ಸಿಜರಿಯನ್ ಆಪರೇಷನ್ ಸೌಲಭ್ಯ ಸದುಪಯೋಗವನ್ನು ಸಾರ್ವಜನಿಕರು ಪಡೆಯಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್. ಹೇಳಿದರು. ತಾಲೂಕಿನ ಗಜೇಂದ್ರಗಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ ರೋಗಿಗಳ ಕುಂದುಕೊರತೆಗಳನ್ನು ಸಂಯಮದಿಂದ ಆಲಿಸಿದ ಅವರು, ಆಸ್ಪತ್ರೆಯಲ್ಲಿ ಇರುವ ವೈಧ್ಯರ ಸದುಪಯೋಗ ಪಡೆಯಿರಿ. ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮವಹಿಸಿ ಚಿಕಿತ್ಸೆ ಒದಗಿಸಬೇಕು. ದಿನಂಪ್ರತಿ ವೈದ್ಯರು ಆಸ್ಪತ್ರೆಯಲ್ಲಿ ಇದ್ದು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.

ನಂತರ ಆಸ್ಪತ್ರೆಯಲ್ಲಿನ ದಾಸ್ತಾನು ಕೊಠಡಿ, ಹೆರಿಗೆ ಕೊಠಡಿ, ಒಳರೋಗಿಗಳ ಕೊಠಡಿ, ಔಷಧಿ ಕೊಠಡಿ ಸೇರಿ ಆಸ್ಪತ್ರೆಗಳ ದಾಖಲೆಗಳನ್ನು ಪರಿಶೀಲಿಸಿದರು. ಆಸ್ಪತ್ರೆಯ ಉದ್ಯಾನವನ ವೀಕ್ಷಣೆ ಮಾಡಿ, ಆಸ್ಪತ್ರೆಯ ಆವರಣದಲ್ಲಿ ನರೇಗಾ ಯೋಜನೆಯಡಿ ವಿವಿಧ ಸಸಿಗಳನ್ನು ನೆಡಸಲು ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.

ನಂತರ ಅವರು ಸೂಡಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಭೇಟಿನೀಡಿ ಆಸ್ಪತ್ರೆಯ ಮೂಲಸೌಕರ್ಯ ಕುರಿತು ಪರಿಶೀಲನೆ ನಡೆಸಿ, ಸಾರ್ವಜನಿಕ ಆಸ್ಪತ್ರೆಗೆ ಆಗಮಿಸುವ ಎಲ್ಲರಿಗೂ ಉತ್ತಮ ಚಿಕಿತ್ಸೆ ದೊರಕಿಸಲು ಆಸ್ಪತ್ರೆ ಅಧಿಕಾರಿಗಳು ಆಧ್ಯತೆ ನೀಡುವಂತೆ ನಿರ್ದೇಶನ ನೀಡಿದರು.

ನರ್ಸರಿ ಭೇಟಿ: ಮುಶೀಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲ್ಲೂರು ನರ್ಸರಿಗೆ ಭೇಟಿ ನೀಡಿ ಸಸಿಗಳ ಬೆಳಸಿ, ನಿರ್ವಹಣೆ ಮಾಡುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು. ನರೇಗಾ ಯೋಜನೆಯಡಿ ರಸ್ತೆ ಬದಿ ನಡೆತೋಪು 9000 ಸಸಿಗಳು, ಶಾಲಾ ಮತ್ತು ಸಂಘ ಸಂಸ್ಥೆಗಳ ವಿತರಣೆಗೆ 7500, ರೈತರಿಗಾಗಿ 25000 ವಿತರಿಸಲು ಸಸಿಗಳು ಸಿದ್ದವಾಗಿವೆ ಎಂದು  ಆರ್.ಎಫ್.ಒ ಮಾಹಿತಿ ನೀಡಿದರು. ಸರಿಯಾದ
ರೀತಿಯಲ್ಲಿ ಸಸಿಗಳನ್ನು ವಿತರಿಸಲು ಮತ್ತು ಸೂಕ್ತ ಸಮಯದಲ್ಲಿ ಸಸಿಗಳನ್ನು ನೆಡಲು ಕ್ರಮಕೈಗೊಳ್ಳಲು ಸಿಇಒ ಭರತ್ ಎಸ್ ಅವರು ಸೂಚಿಸಿದರು.

ನರೇಗಾ ಕಾಮಗಾರಿ ವೀಕ್ಷಣೆ : ತಾಲೂಕಿನ ಚಿಲಝರಿ ಗ್ರಾಮದ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಗಾ ಯೋಜನೆಯಡಿಯಲ್ಲಿ ಬೇಡಿಕೆಯಾಧಾರಿತ ಕೂಲಿಕಾರರಿಗೆ ಕೆಲಸ ನೀಡಿ. ಅವರಿಗೆ ಅಳತೆಗೆ ತಕ್ಕಂತೆ ಕಟ್ಟೆ (ಪಡ)  ಕಡಿಯಬೇಕು. ಅಳತಗೆ ತಕ್ಕಂತೆ ಕೂಲಿ ಪಾವತಿಸಬೇಕು ಎಂದರು.

ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಯೋಜನೆ ವರದಾನವಾಗಿದೆ. ಕೆಲಸಕ್ಕೆ ಬರುವ ಕೂಲಿಕಾರರಿಗೆ ಸರಿಯಾಗಿ ಎನ್.ಎಂ.ಎಂ.ಎಸ್ ಮೂಲಕ ಹಾಜರಾತಿ ಹಾಕಬೇಕು. ಕೂಲಿಕಾರರಿಗೆ ಪ್ರಮಾಣಿಕವಾಗಿ ಕೆಲಸ ನೀಡಿ ಅವರಿಗೆ ಸರಿಯಾಗಿ ಕೂಲಿ ಪಾವತಿಸಬೇಕು ಎಂದು ತಿಳಿಸಿದರು

ವಿವಿಧ ಕಾಮಗಾರಿ ವೀಕ್ಷಣೆ: ಶಾಂತಗೇರಿ ಗ್ರಾಮ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರ ಸಂಖ್ಯೆ, ಹಾಜರಾತಿ, ಎನ್.ಎಂ.ಆರ್ ಹಾಜರಾತಿ ಕೂಲಿಕಾರರು ಗೈರು ಕುರಿತು ಪರಿಶೀಲಿಸಿದರು

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಡಿಗೇರ್,  ಸಹಾಯಕ ಜಿಲ್ಲಾ ಸಮನ್ವಯ ಸಂಯೋಜಕ ಕಿರಣಕುಮಾರ, ಸಾಮಾಜಿಕ ಅರಣ್ಯ ಇಲಾಖೆಯ  ಆರ್.ಎಫ್.ಒ ರಾಮಣ್ಣ ಪೂಜಾರ, ಸಿರಾಜ್, ಪಿಡಿಒಗಳು, ಆರ್.ಸಿ.ಎಚ್. ಅಧಿಕಾರಿಗಳು, ವೈದ್ಯರು, ನರೇಗಾ ಸಿಬ್ಬಂದಿಗಳು ಪಂಚಾಯತ ಸಿಬ್ಬಂದಿಗಳು ಇದ್ದರು.