ಜಿಲ್ಲೆ

ಪ್ರಾಯೋಗಿಕ ಮಾರುಕಟ್ಟೆಗೆ ಡಿಸಿ ಅಸ್ತು, ರೈತರು ಹಾಗೂ ಮಾರಾಟಗಾರರ ನಡುವೆ ಸಂಪರ್ಕ

Bengaluru Rural

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಇಲ್ಲದಂತಾಗಿದೆ. ಮಾರುಕಟ್ಟೆ ಹಾಗೂ ಬೇಡಿಕೆ ಸಮಸ್ಯೆ ನಿವಾರಿಸಲು ವರ್ತಕರಿಗೆ ಹಾಗೂ ರೈತರ ನಡುವೆ ಸಂಪರ್ಕ ಕಲ್ಪಿಸುವ ಪ್ರಾಯೋಗಿಕ ಮಾರುಕಟ್ಟೆ ವ್ಯವಸ್ಥೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ದೇವನಹಳ್ಳಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ರೈತರು ಬೆಳೆದಿರುವ ತರಕಾರಿ ಬೆಳೆಗಳನ್ನು ಹೋಬಳಿಮಟ್ಟದಲ್ಲಿ ಒಟ್ಟುಗೂಡಿಸಿ ವಾಹನಗಳ ಮೂಲಕ ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಮೈದಾನಕ್ಕೆ ಸರಬರಾಜು ಮಾಡಿದರೆ, ನೇರವಾಗಿ ವರ್ತಕರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತರಕಾರಿ ಮಾರಾಟ ಮಾಡುವ ರೈತರಿಗೆ ಸೂಕ್ತ ಭದ್ರತೆ ಹಾಗೂ ವ್ಯವಸ್ಥೆ ಕಲ್ಪಿಸುವ ಪ್ರಾಯೋಗಿಕ ಮಾರುಕಟ್ಟೆ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದು, ಅವರ ಆದೇಶದ ಮೇರೆಗೆ ಪ್ರಾಯೋಗಿಕ ಮಾರುಕಟ್ಟೆ ಒದಗಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಬೆಳೆದ ತರಕಾರಿ ಒಟ್ಟುಗೂಡಿಸಿ ಬೇಡಿಕೆಗೆ ಅನುಸಾರವಾಗಿ ಮಾರುಕಟ್ಟೆಗೆ ಪೂರೈಸಲು ಮುಂದಾದರೆ, ಬೆಳೆಗಳನ್ನು ಮಾರಾಟ ಮಾಡಲು ಸೂಕ್ತ ವೇದಿಕೆ ಸಿಗಲಿದೆ, ಅಲ್ಲದೇ ಸಂಗ್ರಹಿಸಲಾಗಿರುವ ತರಕಾರಿ ಮಾರಾಟ ಮಾಡುವ ಅಂಗಡಿ ಹಾಗೂ ವರ್ತಕರ ದೂರವಾಣಿ ಸಂಖ್ಯೆಗಳನ್ನು ರೈತರಿಗೆ ನೀಡುವ ಮೂಲಕ ಉತ್ತಮ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಕೃಷಿಗೆ ನಿರ್ಬಂಧವಿಲ್ಲ: ಕೃಷಿ ಚಟುವಟಿಕೆ ನಡೆಸಲು ಸರ್ಕಾರ ಯಾವುದೇ ನಿಬರ್ಂಧ ವಿಧಿಸಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಬೆಳೆಗಳನ್ನು ಮಾರಾಟ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ನಾಗರಾಜ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಮತ್ತಿತರರಿದ್ದರು.

ಈ ಪ್ರಯತ್ನದಲ್ಲಿ ಯಶಸ್ಸು ಕಂಡರೆ, ಬೆಂಗಳೂರು ನಗರದಲ್ಲಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಮಾರುಟ್ಟೆ ವಿಸ್ತರಿಸಲು ಸರ್ಕಾರಕ್ಕೆ ಸಲಹೆ ನೀಡಲಾಗುವುದು ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ