ಜಿಲ್ಲೆ

ಮಳೆ ಹಾನಿ ಪ್ರದೇಶಕ್ಕೆ ಡಿಸಿ ಮತ್ತು ಶಾಸಕರ ಭೇಟಿ


ಮಡಿಕೇರಿ: ಮಳೆ ಹಾನಿ ಪ್ರದೇಶಕ್ಕೆ ಶಾಸಕ ಕೆ.ಜಿ.ಬೋಪಯ್ಯ ಮತ್ತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಆಗಸ್ಟ್ ಮೊದಲ ವಾರದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರ ವಹಿಸಬೇಕಿದೆ ಎಂದು ಹೇಳಿದರು.


ಸಂಪಾಜೆ ಬಳಿ ಒಂದು ಮನೆ ತೀವ್ರ ಹಾನಿಯಾಗಿದೆ. ಈ ೫ ಮನೆಗಳಲ್ಲಿ ಒಂದು ಮನೆಗೆ ಹೆಚ್ಚಿನ ಹಾನಿಯಾಗಿದ್ದು, ೪ ಮನೆಗಳು ಸಾಧಾರಣ ಹಾನಿಯಾಗಿದೆ. ಈ ಹಿನ್ನೆಲೆ ಕೊಯನಾಡು ದೇವಸ್ಥಾನ ಕಲಾ ಮಂದಿರಕ್ಕೆ ೫ ಕುಟುಂಬಗಳ ೨೧ ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ ಊಟೋಪಚಾರ ವ್ಯವಸ್ಥೆ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಕಂದಾಯ ನಿರೀಕ್ಷಕ ವೆಂಕಟೇಶ್ ಮಾಹಿತಿ ನೀಡಿದರು.


ಕಿಂಡಿ ಅಣೆಕಟ್ಟಿನ ಎರಡು ಬದಿಗಳಲ್ಲಿ ೫ ಅಡಿ ಎತ್ತರಕ್ಕೆ ತಡೆ ಗೋಡೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಯ ಅಭಿಯಂತರರಿಗೆ ಶಾಸಕರು ಸೂಚಿಸಿದರು. ನಂತರ ಕೊಯನಾಡುವಿನ ೫ ಕುಟುಂಬಗಳು, ಸಂಪಾಜೆ ಗ್ರಾಮದ ೨ ಕುಟುಂಬಗಳಿಗೆ ಹಾಗೂ ಚೆಂಬು ಗ್ರಾಮದ ಎರಡು ಕುಟುಂಬಗಳಿಗೆ ಪರಿಹಾರವಾಗಿ ರೂ.೧೦ ಸಾವಿರಗಳ ಚೆಕ್ ವಿತರಿಸಿದರು.


ಈ ಸಂದರ್ಭದಲ್ಲಿ ಸಂಪಾಜೆ ಹೋಬಳಿ ನೋಡೆಲ್ ಅಧಿಕಾರಿ, ಉಪ ತಹಶೀಲ್ದಾರರು, ಸಂಪಾಜೆ ಹೋಬಳಿ ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಸಹಾಯಕರು ಇದ್ದರು.