ತುಮಕೂರು : ಅರಣ್ಯ ಕೃಷಿಗೆ ಪ್ರಾಧಾನ್ಯತೆ ನೀಡುವುದರಿಂದ ಕಾಡಿನ ಸಂಪತ್ತು ಅಭಿವೃದ್ಧಿಗೊಂಡು ನದಿಗಳ ಸಂರಕ್ಷಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಕಾವೇರಿ ಕೂಗು ಮತ್ತು ಮರಮಿತ್ರ’ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಜಲ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ಇಶಾ ಫೌಂಡೇಶನ್ ಕೈಗೆತ್ತಿಕೊಂಡಿರುವ ‘ಕಾವೇರಿ ಕೂಗು’ ಅಭಿಯಾನ ಶ್ಲಾನೀಯವಾದುದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನದಿ ಪಾತ್ರದಲ್ಲಿನ ಭೂಮಿಯಲ್ಲಿ ಅರಣ್ಯ ಬೆಳೆಸುವುದು, ಆ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನದ ಅಂಗವಾಗಿ ಅರಣ್ಯ ಕೃಷಿ ಮಾಡುವುದರಿಂದ ನದಿ ಸಂರಕ್ಷಣೆಯ ಜತೆಗೆ ಮಣ್ಣಿನ ಫಲವತ್ತತೆ ಹೆಚ್ಚಲಿದ್ದು, ಅಂತರ್ಜಲ ಅಭಿವೃದ್ಧಿಗೊಳ್ಳಲಿದೆ. ರೈತರು ಉತ್ತಮ ಇಳುವರಿ ಪಡೆಯಬಹುದು ಎಂದರು.
ಜಿಪಂ ಸಿಇಒ ಡಾ.ಕೆ.ವಿದ್ಯಾಕುವಾರಿ ಮಾತನಾಡಿ, ಕಾವೇರಿ ಕೂಗು ಅಭಿಯಾನ ಸರ್ಕಾರ ಹಾಗೂ ಇಶಾ ಫೌಂಡೇಶನ್ ವತಿಯಿಂದ ನಡೆಸಲಾಗುತ್ತಿದೆ. ಮುಖ್ಯವಾಗಿ ಅರಣ್ಯ ಕೃಷಿಗೆ ಮಹತ್ವ ಕೊಡುವುದು ಈ ಅಭಿಯಾನದ ಉದ್ದೇಶವಾಗಿದ್ದು, ರೈತರೆಲ್ಲಾ ಫಲ ಕೊಡುವಂತ ಮರಗಳನ್ನು ಬೆಳೆಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಅವರಿಗೆ ಆದಾಯ ಹೆಚ್ಚಾಗಲಿದೆ. ಇದರ ಜತೆಗೆ ಕಾವೇರಿ ನದಿ ಉಳಿಸುವ ಕೆಲಸವಾಗುತ್ತದೆ ಎಂದರು.
ಅರಣ್ಯ ಕೃಷಿಗೆ ಪ್ರಾಧಾನ್ಯತೆ ಕೊಡುವ ಮೂಲಕ ಕಾವೇರಿ ಕೂಗು ಅಭಿಯಾನಕ್ಕೆ ಕೈಜೋಡಿಸಬೇಕು. ರೈತರೆಲ್ಲರೂ ಅರಣ್ಯ ಕೃಷಿ ಅಳವಡಿಸಿಕೊಂಡು ಅಂತರ್ಜಲಮಟ್ಟ ಹೆಚ್ಚಿಸಬೇಕು. ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಸೇರಿ ಸಂಬಂಧಿಸಿದ ಎಲ್ಲ ಇಲಾಖೆಗಳು ಕಾರ್ಯಕ್ರಮ ಯಶಸ್ವಿಗಾಗಿ ಕೈಜೋಡಿಸಿದ್ದು, ಇಂದು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಗ್ರಾಪಂಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಪ್ರಾದೇಶಿಕ ಅರಣ್ಯ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಸಾವಾಜಿಕ ಅರಣ್ಯ ಉಪವಿಭಾಗದ ಸಂರಕ್ಷಣಾಧಿಕಾರಿ ನಾಗರಾಜ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ, ಇಶಾ ಫೌಂಡೇಶನ್‌ನ ಸ್ವಾಮಿನವಣ, ಜಿಲ್ಲಾ ವ್ಯವಸ್ಥಾಪಕ ಸಂತೋಷ್ ಇದ್ದರು.