ವೆಂಕಟರಾಜು ಎಸ್ ದೊಡ್ಡಬಳ್ಳಾಪುರ
ಗ್ರಾಮೀಣ ಭಾಗಗಳಲ್ಲಿ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಕೆರೆ-ಕುಂಟೆಗಳನ್ನೇ ಅವಲಂಬಿಸಿವೆ.
ಆದರೆ ಕೆಲ ದುಷ್ಕರ್ಮಿಗಳ ಕೆಟ್ಟ ಮನಸ್ಥಿತಿಯಿಂದಾಗಿ ಕೆರೆಗಳು ದುರ್ನಾತ ಬೀರುವಂತಾಗಿದೆ. ಮುತ್ತೂರು, ಬಾಶೆಟ್ಟಿಹಳ್ಳಿ, ಪಾಲನಜೋಗಹಳ್ಳಿ ಕೆರೆಗಳ ಒಡಲಿಗೆ ಕಸ ಸುರಿಯುತ್ತಿದ್ದು, ಈ ಬಗ್ಗೆ ಸ್ಥಳೀಯ ಆಡಳಿತ ತಲೆಕೆಡಿಸಿಕೊಳ್ಳದಿರುವುದರಿಂದ ಕೆರೆ ಪರಿಸರ ಅಧೋಗತಿಯತ್ತ ಹೆಜ್ಜೆ ಹಾಕುತ್ತಿದೆ.
ಮನೆ, ಅಂಗಡಿ, ಚಿಕನ್ ಮಟನ್ ಸ್ಟಾಲ್‌ನಲ್ಲಿ ಸಂಗ್ರಹವಾಗುವ ಹಾಗೂ ಕೋಳಿಗಳ ತ್ಯಾಜ್ಯ ಸೇರಿ ಮತ್ತಿತರ ಕಸ ಹಾಕುವ ಸ್ಥಳವಾಗಿ ಕೆರೆಗಳು ಮಾರ್ಪಾಡಾಗಿವೆ. ಯಾರೂ ಕೇಳಲ್ಲ ಎಂಬ ಧೈರ್ಯದಿಂದಲೇ ಜನ ಕಸ ಎಸೆದು ಹೋಗುತ್ತಾರೆ. ಇದರಿಂದ ಕೆರೆ ನೀರು ಸಾಕಷ್ಟು ಹಾನಿಯಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಪಂ, ಪಪಂ, ನಗರಸಭೆಯಲ್ಲಿ ಕಸ ಸಂಗ್ರಹ ಸಮರ್ಪಕವಾಗಿ ಆಗುತ್ತಿಲ್ಲ. ಇದರ ನಿರ್ವಹಣೆ ಕೂಡ ಇಲ್ಲ. ಪರಿಣಾಮ ಜನರು ಮನೆಯ ಕಸ ಹಾಕಲು ಸಾಮಾನ್ಯವಾಗಿ ಖಾಲಿ ಜಾಗ ಅಥವಾ ಕೆರೆಗಳನ್ನು ಬಳಸುತ್ತಾರೆ. ಇದು ಸಾಕಷ್ಟು ಅನಾಹುತಕ್ಕೆ ಕಾರಣವಾಗುತ್ತಿದೆ. ನಗರದ ಜಿ.ರಾಮೇಗೌಡ ವೃತ್ತದ ಸಮೀಪವಿರುವ ಕುಂಟೆ ಬಳಿ ಕಸದ ರಾಶಿಯಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ಇದೆ.
ತ್ಯಾಜ್ಯ ಗೂಡಾದ ಕೆರೆಗಳು ಚಿಕ್ಕತುಮಕೂರು, ದೊಡ್ಡತುಮಕೂರು, ಮಜರಾಹೊಸಹಳ್ಳಿ, ಬಾಶೆಟ್ಟಿಹಳ್ಳಿ, ವೀರಾಪುರ ಸೇರಿ ಅರ್ಕಾವತಿ ನದಿ ಪಾತ್ರದ ಕೆರೆಗಳು ಸಂಪೂರ್ಣ ವಿಷಯುಕ್ತವಾಗಿವೆ. ಕೈಗಾರಿಕಾ ಪ್ರದೇಶ ಮತ್ತು ನಗರದ ಭಾಗದಿಂದ ಹರಿದು ಬರುತ್ತಿರುವ ರಾಸಾಯನಿಕಯುಕ್ತ ನೀರಿನಿಂದ ಕೆರೆಗಳ ನೀರು ವಿಷಯುಕ್ತವಾಗಿದೆ. ವಾರದ ಅಂತರದಲ್ಲಿ ಚಿಕ್ಕತುಮಕೂರು ಕೆರೆಯಲ್ಲಿನ ಸಾಕಷ್ಟು ಮೀನುಗಳು ಸತ್ತಿರುವುದೇ ಇದಕ್ಕೆ ಸಾಕ್ಷಿ. ಈ ಭಾಗದ ರೈತರು ಕೆರೆಗಳ ಶುದ್ಧೀಕರಣಕ್ಕಾಗಿ ಹಲವು ರೀತಿಯ ಹೋರಾಟ ನಡೆಸುತ್ತಿದ್ದಾರೆ. ಇದರೊಟ್ಟಿಗೆ ಸುಪ್ರೀಂಕೋರ್ಟ್‌ನ ಹಸಿರು ನ್ಯಾಯಪೀಠದಲ್ಲಿ ದಾವೆ ಹೂಡಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ.
ಕೆರೆಯ ಒಡಲು ಖಾಲಿ ಖಾಲಿ: ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಮುತ್ತೂರು ಕೆರೆಯನ್ನು 2018ರಲ್ಲಿ ಸ್ಥಳೀಯ ಜನರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗಿತ್ತು. ಎರಡು ವರ್ಷಗಳಿಂದಲೂ ಕೆರೆ ಭರ್ತಿಯಾಗಿ ಜನಾಕರ್ಷಣೆಗೊಂಡಿತ್ತು. ಈ ಭಾಗದಲ್ಲಿ ಅಂತರ್ಜಲದ ಮಟ್ಟವೂ ಹೆಚ್ಚಾಗಿತ್ತು. ಒಂದೇ ತಿಂಗಳ ಅಂತರದಲ್ಲಿ ಕೆರೆಯಲ್ಲಿದ್ದ ಬಹುತೇಕ ನೀರು ಖಾಲಿಯಾಗುತ್ತಿದ್ದು ಬರಿದಾಗುವ ಆತಂಕ ಎದುರಾಗಿದೆ. ಅಚ್ಚರಿಗೊಂಡ ಕೆಲ ಪರಿಸರಾಸಕ್ತರು ನೀರು ಖಾಲಿ ಆಗುತ್ತಿರುವುದ ಮೂಲ ಪತ್ತೆಹಚ್ಚಲು ಮುಂದಾದಾಗ ಕೆರೆ ಅಂಗಳದ ಅಂಚಿನಲ್ಲೇ ಹಾಕಲಾಗಿರುವ ಒಳಚರಂಡಿ ಮ್ಯಾನ್ ಹೋಲ್ ಒಡೆದು ಹೋಗಿ ಪೈಪ್ ಲೈನ್ ಮೂಲಕ ಕೆರೆ ನೀರು ಚಿಕ್ಕತುಮಕೂರು ಕೆರೆ ಸೇರುತ್ತಿರುವುದು ಕಂಡು ಬಂದಿದೆ. ನಗರಸಭೆಯವರು 2007ರಲ್ಲಿ ಒಳಚರಂಡಿ ನೀರು ಹರಿದು ಹೋಗಲು ಹಾಕಿದ್ದ ಪೈಪ್‌ಲೈನ್ ಕೆರೆ ಹೊರಭಾಗದಲ್ಲಿ ಹಾಕಿದ್ದರೆ ಇಂಥ ದುರಂತ ಸಂಭವಿಸುತ್ತಿರಲಿಲ್ಲ ಎಂದು ಪರಿಸರ ಆಸಕ್ತರು ದೂರಿದ್ದಾರೆ.