ಲಕ್ಷ್ಮೇಶ್ವರ: ಪಟ್ಟದಲ್ಲಿಯೂ ಕಳೆದ 2 ದಿನಗಳಿಂದ ಸರ್ವರ್ ಇಲ್ಲದೆ ಬಹುತೇಕ ಫಲಾನುಭವಿಗಳಿಗೆ ಪಡಿತರ ವಿತರಣೆಯೇ ಆಗಿಲ್ಲ. ಫಲಾನುಭವಿಗಳು ಕೆಲಸ ಬಿಟ್ಟು ಬೆಳಗ್ಗೆಯಿಂದ ರಾತ್ರಿ ವರೆಗೂ ನ್ಯಾಯ ಬೆಲೆ ಅಂಗಡಿಗಳ ಮುಂದೆ ಕಾಯುತ್ತಿದ್ದಾರೆ. ಇದು ವಿತರಕರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ.
ಎಲ್ಲ ನ್ಯಾಯ ಬೆಲೆ ಅಂಗಡಿಗಳ ಮುಂದೆ ಜು.25ರೊಳಗೆ ಪಡಿತರ ತೆಗೆದುಕೊಂಡು ಹೋಗಬೇಕಿದೆ. ಜು.26ರ ನಂತರ ಸರ್ವರ್ ಬಂದ್ ಆಗುತ್ತದೆ ಎಂದು ಸೂಚನೆ ಅಂಟಿಸಿದ್ದಾರೆ. ಆದರೆ 2 ದಿನ ಮೊದಲೇ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲಿ ಸಂಪೂರ್ಣ ತೊಂದರೆಯಾಗಿದೆ. ಈ ತಿಂಗಳ 16, 17ರಂದು ಗೋದಾಮಿನಿಂದ ಪಡಿತರ ಸರಬರಾಜು ಆಗಿದೆ. ಸರ್ವರ್ ಸಮಸ್ಯೆ ಇದ್ದು 26 ರೊಳಗೆ ವಿತರಣೆ ಕಷ್ಟಸಾಧ್ಯ. ಸರ್ವರ ಸಮಸ್ಯೆ ಬಗೆಹರಿಸಿ ಮತ್ತು ಈ ತಿಂಗಳ ಅಂತ್ಯದವರೆಗೆ ವಿತರಣೆಗೆ ಅವಕಾಶ ಕಲ್ಪಿಸಬೇಕು ಎಂಬುದು ವಿತರಕರು ಮತ್ತು ಫಲಾನುಭವಿಗಳ ಆಗ್ರಹವಾಗಿದೆ. ಏಕಕಾಲಕ್ಕೆ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳು ತಂತ್ರಾಂಶ ಬಳಸುವುದರಿಂದ ಈ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ತಾಲೂಕು ಆಹಾರ ನಿರೀಕ್ಷಕ ಜಗದೀಶ ಕುರುಬರ.