ಜಿಲ್ಲೆ

ಶ್ರೀಮಠಕ್ಕೆ ದವಸ ಧಾನ್ಯ

Davangere - Desk - Ganesh M K

ಜಗಳೂರು: ಸಿರಿಗೆರೆಯಲ್ಲಿ ತರಳಬಾಳು ಮಠದ ಲಿಂ. ಶಿವಕುಮಾರ ಸ್ವಾಮೀಜಿಗಳ 31ನೇ ಶ್ರದ್ಧಾಂಜಲಿ ಸಮಾರಂಭ ಸೆ.20ರಿಂದ 24ರ ವರೆಗೆ ನಡೆಯಲಿದ್ದು, ದಾಸೋಹದ ನಿಮಿತ್ತ ತಾಲೂಕಿನ ಬಿದರಕೆರೆ ತರಳಬಾಳು ರೈತ ಉತ್ಪಾದಕ ಕಂಪನಿ ಅಡಿ ಬರುವ ಗ್ರಾಮಗಳ ರೈತರು ಶ್ರೀಮಠಕ್ಕೆ ದವಸ ಧಾನ್ಯ ನೀಡಿ ಭಕ್ತಿ ಸಮರ್ಪಿಸಿದರು.

ಬಿದರಕೆರೆ ಎಫ್‌ಪಿಒ ಗುಚ್ಛ ಗ್ರಾಮಗಳ ಆಡಿ ಬರುವ ಬಿದರಕೆರೆ, ಅರಿಶಿಣಗುಂಡಿ, ಜಮ್ಮಾಪುರ, ಕಟ್ಟಿಗೆಹಳ್ಳಿ, ರಸ್ತೆಮಾಕುಂಟೆ, ಬಿಸ್ತುವಳ್ಳಿ, ಗುತ್ತಿದುರ್ಗ, ಮೆದಗಿನಕೆರೆ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳ ರೈತರು ಹತ್ತು ಕ್ವಿಂಟಾಲ್ ಅಕ್ಕಿ, 1 ಟನ್ ಕುಂಬಳ, 1 ಕ್ವಿಂಟಾಲ್ ರಾಗಿ, ವಿವಿಧ ತರಕಾರಿ ಅರ್ಪಿಸಿದರು.

ಸಿರಿಗೆರೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಭಕ್ತರು ಭಾಗವಹಿಸಲಿದ್ದಾರೆ. ಗುರುಶಾಂತೇಶ್ವರ ದಾಸೋಹ ಭವನಕ್ಕೆ ಹೊಂದಿಕೊಂಡಿರುವ ಸಭಾ ಮಂಟಪದ ಪಕ್ಕದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಲಿದ್ದು, ಪ್ರಸಾದ ವ್ಯವಸ್ಥೆಗೆ ಬಿದರಕೆರೆ ಅಮೃತ ರೈತ ಉತ್ಪಾದಕ ಕಂಪನಿ ಅಳಿಲು ಸೇವೆ ಮಾಡಲು ಮುಂದಾಗಿದೆ ಎಂದು ಅಧ್ಯಕ್ಷ ಎಚ್.ಎಂ. ಮಂಜುನಾಥ್ ತಿಳಿಸಿದರು.