ಜಿಲ್ಲೆ

ಸಹಕಲಾವಿದರಿಗೆ ದವಸ ಭಾಗ್ಯ ಕಷ್ಟದಲ್ಲಿರುವ ದಿನಗೂಲಿ ನೌಕರರಿಗೆ ಸಹಾಯಹಸ್ತ

ಬೆಂಗಳೂರು: ಕರೊನಾದಿಂದಾಗಿ ಕನ್ನಡ ಚಿತ್ರರಂಗ ಸ್ತಬ್ಧವಾಗಿದೆ. ದೊಡ್ಡ ಕಲಾವಿದರು ಮತ್ತು ತಂತ್ರಜ್ಞರೇನೋ ಕೆಲಸವಿಲ್ಲದಿದ್ದರೂ ಬದುಕಬಹುದು ಎಂಬಂತಹ ಸ್ಥಿತಿ ಇದೆ. ಆದರೆ, ಪ್ರತಿ ದಿನದ ಸಂಬಳವನ್ನೇ ನಂಬಿ ಬದುಕುತ್ತಿರುವ ಕಾರ್ವಿುಕರಿಗೆ ಮತ್ತು ಸಹಕಲಾವಿದರಿಗೆ ದೊಡ್ಡ ಪೆಟ್ಟು ಬಿಟ್ಟಿದೆ. ಈ ನಿಟ್ಟಿನಲ್ಲಿ ಈಗಾಗಲೇ ‘ಲೂಸಿಯಾ’ ಪವನ್ ಸೇರಿದಂತೆ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಸಿನಿಮಾ ಕಾರ್ವಿುಕರ ಸಲುವಾಗಿ ಫಂಡ್ ರೈಸ್ ಮಾಡಲು ಮುಂದಾಗಿದ್ದಾರೆ. ಈಗ ಕರ್ನಾಟಕ ಚಲನಚಿತ್ರ ಸಹಕಲಾವಿದರ, ಕಿರುತೆರೆ ಹಾಗೂ ಪ್ರತಿನಿಧಿಗಳ ಸಂಘ ಸಹ ಕೈಜೋಡಿಸಿದೆ.

ಕರೊನಾ ಸೋಂಕು ತಡೆಗಟ್ಟಲು ಹಲವು ದಿನಗಳಿಂದ ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ, ಸಹಕಲಾವಿದರು ಸಹ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಬಂದ ಸಂಘ ಸೋಮವಾರ ರಾತ್ರಿ ಸದಸ್ಯರಿಗೆ ಅಗತ್ಯವಿರುವ ಅಕ್ಕಿ, ಬೇಳೆ, ಎಣ್ಣೆ ಮುಂತಾದ ದವಸ ನೀಡುವುದರ ಜತೆಗೆ, 500 ರೂಗಳನ್ನು ನೀಡಿದೆ. ಸಂಘದ ಅಧ್ಯಕ್ಷರಾದ ದಿವಾಕರ್ ಅರಗ ಅವರು, ಗುರುತಿನ ಚೀಟಿ ತಂದವರಿಗೆ ಆದ್ಯತೆ ಎಂದು ಮೊದಲೇ ತಿಳಿಸಿದ್ದರು. ಅದರಂತೆ ನೂರಾರು ಸಹ ಕಲಾವಿದರು ಗುರುತಿನ ಚೀಟಿ ತೋರಿಸಿ ಸಂಘದ ಕಚೇರಿಯಲ್ಲಿ ಅಗತ್ಯ ದಿನಸಿಯನ್ನು ಪಡೆದಿದ್ದಾರೆ.

ಈ ಹಿಂದೆ 2000ದಲ್ಲಿ ಡಾ. ರಾಜಕುಮಾರ್ ಅವರು ಕಿಡ್ನಾಪ್ ಆಗಿದ್ದ ಸಂದರ್ಭದಲ್ಲಿ, ಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡಿತ್ತು. ಆ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಕಾರ್ವಿುಕರ ಮತ್ತು ತಂತ್ರಜ್ಞರ ಒಕ್ಕೂಟದಿಂದ ಇದೇ ರೀತಿ ನೆರವು ನೀಡಲಾಗಿತ್ತು. ಈ ಬಾರಿ ಒಕ್ಕೂಟ ಇಂಥದ್ದೊಂದು ಹೆಜ್ಜೆ ಇಡುವ ಮುನ್ನ, ಕರ್ನಾಟಕ ಚಲನಚಿತ್ರ ಸಹಕಲಾವಿದರ, ಕಿರುತೆರೆ ಹಾಗೂ ಪ್ರತಿನಿಧಿಗಳ ಸಂಘವು ತನ್ನ ಸದಸ್ಯರಿಗೆ ದವಸ ನೀಡಿ ಸಹಾಯಹಸ್ತ ಚಾಚಿದೆ.