ದಾವಣಗೆರೆ: ಕೆವಿಕೆ ಅಂಗಳದಲ್ಲಿ ಭಾನುವಾರ ಆಯೋಜಿಸಿದ್ದ ಪಾರಂಪರಿಕ ಬೀಜ ಮೇಳದಲ್ಲಿ ಎಲ್ಲೆಲ್ಲೂ ಬಿತ್ತನೆಬೀಜಗಳ ಸರಮಾಲೆ. 30 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶಿಸಲಾದ ಬಿತ್ತನೆ ಬೀಜಗಳು ನೋಡುಗರ ಗಮನ ಸೆಳೆದವು. ಮೂರಡಿ ಉದ್ದದ ಹೀರೇಕಾಯಿ, ಐದಡಿಯ ಸೋರೆಕಾಯಿ, ಕೆಂಪು ಮೂಲಂಗಿಯ ಬೀಜ ವೈವಿಧ್ಯಗಳನ್ನು ಹರಿಯಾಣಾದ ಸೋಣಿಪತ್‌ನಿಂದ ಬಂದಿದ್ದ ರಾಜೇಶ್ ಪ್ರದರ್ಶಿಸಿದ್ದರು. ‘ಈ ಮಣ್ಣಿನಲ್ಲಿ ಅಲ್ಲಿನ ಗಿಡ ಬೆಳೆಯುತ್ತಾ? ಮುಂಗಾರಿಗೆ ಹಚ್ಚಬೇಕಾ, ಹಿಂಗಾರಿಗೆ ಹಾಕಬೇಕಾ? ಎಂದು ಜನರು ಕೇಳುತ್ತಲಿದ್ದರು.
ಅಂಗಾಂಶ ಕೃಷಿಯ ಬೀಜರಹಿತ ನಿಂಬೆ ಗಿಡ, ತೈವಾನ್ ಪಿಂಕ್ ಪೇರಲೆ, ಲಕ್ಷಣ ಫಲ ಗಿಡಗಳನ್ನು ಕೆಲವರು ಮಾರಾಟ ಮಾಡಿದರು. ಭತ್ತ, ರಾಗಿಯ ವಿವಿಧ ತಳಿಗಳು, ಕೆಂಪು ಬೆಂಡಿ, ಶ್ರೀಲಂಕಾ ಬೆಂಡೆಕಾಯಿ, ಕೆಂಪು ಅವರೆ ಸೇರಿದಂತೆ ತರಕಾರಿ, ಹೂವು, ಹಣ್ಣು ಹಾಗೂ ವಿವಿಧ ಧಾನ್ಯದ ಬೀಜಗಳನ್ನು ಜನರು ಕೊಂಡುಕೊಂಡರು. ಒಡಿಸ್ಸಾ, ತಮಿಳುನಾಡು ಅಲ್ಲದೆ ಕರ್ನಾಟಕದ ವಿವಿಧ ಭಾಗದ ಬೀಜ ತಳಿ ಸಂರಕ್ಷಕರು ಪಾಲ್ಗೊಂಡಿದ್ದರು.
ವಿಷಮುಕ್ತ ದಿನಸಿ, ಮಣ್ಣಿನ ಉತ್ಪನ್ನಗಳು, ಈಳಿಗೆ ಮಣೆ ಇತರೆ ವಸ್ತುಗಳು, ಉಪ್ಪಿನಕಾಯಿ ಇತರೆ ತಿನಿಸುಗಳು ಕೂಡ ಜನರ ಗಮನ ಸೆಳೆದವು. ಮಾವು, ಪೇರಲ, ಪಪ್ಪಾಯ ಹಣ್ಣುಗಳ ಮಾರಾಟದಿಂದ ವರ್ತಕರು ಖುಷಿಪಟ್ಟರು. ತಾಳೆ ಎಲೆಗಳಿಂದ ಮಾಡಿದ ಆಕರ್ಷಕ ಆಭರಣಗಳು ಮಹಿಳೆಯರ ಕಣ್ಸೆಳೆದವು.