ಜಿಲ್ಲೆ

ಸಂಗೀತ ಆತ್ನೋನ್ಮತಿಯ ಮಾರ್ಗ   ನಾದ ಸಮ್ಮಾನ ಕಾರ್ಯಕ್ರಮದಲ್ಲಿ ಡಾ. ಮೃತ್ಯುಂಜಯ ಶೆಟ್ಟರ ಅಭಿಮತ

ಡಿ. ಎಂ. ಮಹೇಶ್

ದಾವಣಗೆರೆ: ಸಂಗೀತ ಆತ್ಮೋನ್ನತಿಯ ಮಾರ್ಗವಾಗಿದ್ದು, ಇದು ನಮ್ಮನ್ನು ಬೆಳೆಸುವ ಜತೆಗೆ ಭಕ್ತಿ ಪಥದತ್ತ ಕೊಂಡೊಯ್ಯಲಿದೆ ಎಂದು ಗದಗದ ಪಿಪಿಜಿ ಸಂಗೀತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಮೃತ್ಯಂಜಯ ಶೆಟ್ಟರ ಹೇಳಿದರು.
ಇಲ್ಲಿನ ಶ್ರೀ ಸದ್ಗುರು ಬ್ರಹ್ಮ ಚೈತನ್ಯ ಮಹಾರಾಜರ ಮಂದಿರದಲ್ಲಿ ಪಂಡಿತ ಲಿಂಗರಾಜ ಬುವಾ ಯರಗುಪ್ಪಿ ಸಂಗೀತ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಂಡಿದ್ದ ಡಾ. ಅಶೋಕ ಹುಗ್ಗಣ್ಣವರ ಪರಂಪರಾ ಸಂಗೀತ ಹಾಗೂ ನಾದ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ ಎಂಬುದು ಕೇವಲ ಮನರಂಜನೆಯ ಸಾಧನವಲ್ಲ. ಅದೊಂದು ಜ್ಞಾನೋದಯದ ರಹದಾರಿಯಾಗಿದೆ. ಇದು ಅನಂತ ನಾದದವರೆಗೆ ಕರೆದೊಯ್ಯಲಿದೆ ಎಂದು ಹೇಳಿದರು.
ಪಂಡಿತ ಲಿಂ. ಲಿಂಗರಾಜ ಬುವಾ ಯರಗುಪ್ಪಿ ಅವರಂತಹ ಲಯ ಹಾಗೂ ಶ್ರುತಿಬದ್ಧವಾಗಿ ಹಾಡುವ ಮತ್ತೊಬ್ಬ ಸಂಗೀತ ಕಲಾವಿದರನ್ನು ತಾವು ಕಂಡಿಲ್ಲ. ಡಾ. ಅಶೋಕ ಹುಗ್ಗಣ್ಣವರ ಜತೆ ಸೇರಿ ಸಂಗೀತ ಕುರಿತಾ ಡಾಕ್ಯುಮೆಂಟರಿ ಮಾಡುವ ಅವಕಾಶ ತಮಗೆ ಸಿಕ್ಕಿತ್ತು ಎಂದು ಹೇಳಿದರು.
ಧಾರವಾಡದ ಪಂಡಿತ ಅಲ್ಲಮಪ್ರಭು ಕಡಕೋಳ ಅವರ ತಬಲಾ ವಾದನದ ಜತೆಗೆ ಸುದೀರ್ಘ ವರ್ಷಗಳ ಕಾಲ ನಾನು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದೇನೆ. ಅವರೊಬ್ಬ ಅಪರೂಪದ ಕಲಾವಿದ. ಅವರು ತಬಲಾದ ಮೂಲಕ ತಾಳವನ್ನಲ್ಲದೆ ರಾಗವನ್ನೂ ಮೂಡಿಸುತ್ತಿದ್ದರು. ಅವರಿಗೆ ಹೆಜ್ಜೆಯಾದ ಪತ್ನಿ ಗೀತಮ್ಮ ಪ್ರೀತಿಯ ಲಯ ಕೊಟ್ಟರು ಎಂದು ಶ್ಲಾಘಿಸಿದರು.
ಧಾರವಾಡದ ತಬಲಾ ವಾದಕ ಮತ್ತು ಬೋಧಕರಾದ ಪಂಡಿತ ಅಲ್ಲಮಪ್ರಭು ಕಡಕೋಳ ಅವರಿಗೆ ಇದೇ ವೇಳೆ 2024ನೇ ಸಾಲಿನ ಪಂಡಿತ ಲಿಂಗರಾಜ ಬುವಾ ಯರಗುಪ್ಪಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ಮಾತನಾಡಿದ ಅವರು, ಕಲಾವಿದನಾಗಿ ನಾನು ಸದಾ ಸಂಗೀತ ಸಾಧನೆಯಲ್ಲಿ ತೊಡಗಿದ್ದೇನೆ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ಧಾನೆ. ಸಂಗೀತ ಯಾನ ನಿರಂತರವಾಗಿ ನಡೆದಿದೆ ಎಂದರಲ್ಲದೆ ನನ್ನ ಮೇಲೆ ಪ್ರೀತಿ ತೋರಿದ ಅಶೋಕ ಹುಗ್ಗಣ್ಣವರ ಹಾಗೂ ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಅನೇಕ ಕಲಾವಿದರನ್ನು ಸನ್ಮಾನಿಸಲಾಯಿತು. ದಾವಣಗೆರೆಯ ಗೌರಿ ಎಂ. ಜೋಶಿ ಹಿಂದುಸ್ತಾನಿ ಹಾಗೂ ಸುಗಮ ಸಂಗೀತ ಗಾಯನದೊಂದಿಗೆ ರಂಜಿಸಿದರೆ, ಬೆಂಗಳೂರಿನ ಅನಿರುದ್ಧ ಐತಾಳ್, ಹೊನ್ನಾವರದ ವಿಶ್ವೇಶ್ವರ ಭಟ್ ಹಾಗೂ ಶ್ರೀಮತಿ ರೇಷ್ಮಾ ಭಟ್ ಹಿಂದುಸ್ತಾನಿ ಗಾಯನದ ರಸದೌತಣ ಉಣಬಡಿಸಿದರು.
ಗೀತಾ, ಸಂಗೀತ ಪ್ರತಿಷ್ಠಾನದ ಅಧ್ಯಕ್ಷ, ಹುಬ್ಬಳ್ಳಿಯ ಡಾ. ಅಶೋಕ ಹುಗ್ಗಣ್ಣವರ, ನಿವೃತ್ತ ಸ್ವಾತಂತ್ರೃಯೋಧ ಶಿವಣ್ಣ, ಬಿಎಸ್ಸೆನ್ನೆಲ್‌ನ ನಿವೃತ್ತ ಇಂಜಿನಿಯರ್ ಎನ್.ಎಸ್. ಕುಲಕರ್ಣಿ, ಸಂಗೀತ ಕಲಾವಿದ ಅಶೋಕ ಕುಲಕರ್ಣಿ, ಆರ್.ಜಿ.ಭಟ್, ಬ್ರಹ್ಮಚೈತನ್ಯ ಮಂದಿರದ ಅಧ್ಯಕ್ಷ ಪಿ.ಸಿ. ಮಹಾಬಲೇಶ್ವರ, ಕಾರ್ಯದರ್ಶಿ ಸುಬ್ರಮಣ್ಯ ಇತರರಿದ್ದರು. ಶ್ರೀಕಾಂತ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.
--