ದಾವಣಗೆರೆ: ದೇಶದ ಸಂವಿಧಾನ ಜಗತ್ತಿನ ಎಲ್ಲ್ಲ ಸಮುದಾಯಗಳನ್ನು ಸಮಾನ ದೃಷ್ಟಿಕೋನದಲ್ಲಿ ನೋಡುವಂತೆ ಮಾಡಿದೆ. ಇದರ ಶ್ರೇಯಸ್ಸು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಬಿ. ರಾಮಚಂದ್ರಪ್ಪ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಹರಿಹರದ ಹಿಂದು ರುದ್ರಭೂಮಿಯಲ್ಲಿ ಹಮ್ಮಿಕೊಂಡಿದ್ದ ಮೌಢ್ಯ ವಿರೋಧಿ ಹಾಗೂ ಪರಿವರ್ತನೆ, ವೈಚಾರಿಕ ಬೆಳಕಿನಡೆಗೆ ಸಾಗೋಣ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹುಟ್ಟು, ಪ್ರದೇಶ, ವರ್ಣ ಮತ್ತು ಭಾಷೆಯಿಂದ ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ. ಎಲ್ಲರೂ ಸಮಾನರು ಎಂದು ಹೇಳುವ ಸಿದ್ಧಾಂತದಿಂದ ದೇಶದಲ್ಲಿ ಇಂದಿಗೂ ಒಕ್ಕೂಟ ವ್ಯವಸ್ಥೆ ಆಸ್ತಿತ್ವದಲ್ಲಿದೆ ಎಂದರು.
ಆರ್‌ಎಸ್‌ಎಸ್ ಮುಖಂಡ ಎಂ.ಎಸ್. ಗೋಳವಾಲ್ಕರ್ ಮಾತನಾಡಿ, ಶೂದ್ರರನ್ನು ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಭೂಮಿಯಿಂದ ದೂರವಿಡಬೇಕೆಂದು ಹೇಳುತ್ತಿದ್ದರು. ಮಾಂಸ ಸೇವಿಸಿ ಶೂದ್ರರು ಗಟ್ಟಿಯಾಗದಂತೆ ತಡೆಯಲು ಗೋಮಾಂಸ ಸೇವನೆಯಿಂದ ತಡೆಯುವ ಹುನ್ನಾರ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಎನ್.ಎಚ್.ಶ್ರೀನಿವಾಸ್ ನಂದಿಗಾವಿ ಮಾತನಾಡಿ, ಇಂದಿನ ದಿನಮಾನದಲ್ಲಿ ಮೌಢ್ಯ ತೊರೆದು ವೈಜ್ಞಾನಿಕ ಸಮಾಜದ ನಿರ್ಮಾಣಕ್ಕೆ ನಾವೆಲ್ಲ ಕೈಜೋಡಿಸಬೇಕಾದ ಅನಿವಾರ್ಯತೆಯಿದೆ ಎಂದರು.
ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್, ಬ್ಲಾಕ್ ಕಾಂಗ್ರೆಸ್ ಮುಖಂಡ ಎಂ.ಬಿ. ಅಬೀದ್ ಅಲಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯದ್ ಎಜಾಜ್, ನಗರಸಭೆ ಮಾಜಿ ಸದಸ್ಯ ಎಂ.ಬಿ. ಅಣ್ಣಪ್ಪ, ಮಾನವ ಬಂಧುತ್ವ ವೇದಿಕೆ ಹಾಗೂ ದಸಂಸ ಮುಖಂಡರಾದ ಸಂತೋಷ್ ನೋಟದವರ್, ಹೆಗ್ಗೆರೆ ರಂಗಪ್ಪ, ಮಂಜುನಾಥ್ ಕುಪ್ಪೇಲೂರ್, ಪಾರ್ವತಿ ಬೋರಯ್ಯ, ಮಂಜುನಾಥ್ ದೊಡ್ಡಮನಿ, ಮಂಜಪ್ಪ ಜಿ.ಎಂ. ಇತರರಿದ್ದರು. ಮಾನವ ಬಂಧುತ್ವ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.