ದಾವಣಗೆರೆ: ರಾಜ್ಯ ಯುವ ಜನೋತ್ಸವದಲ್ಲಿ ಹಾಡು-ನೃತ್ಯ ರಂಜನೆಯೇ ಹೆಚ್ಚು ಸದ್ದು ಮಾಡಿದರೆ, ನಗರದ ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳ ಸದ್ದಿಲ್ಲದೇ ಸುದ್ದಿಯಾಯಿತು.
16 ಜಿಲ್ಲೆಗಳಿಂದ ವೈಯಕ್ತಿಕ ಹಾಗೂ 13 ಜಿಲ್ಲೆಗಳಿಂದ ಸಮೂಹ ಮಾದರಿಗಳು ಪ್ರದರ್ಶಿತವಾಗಿದ್ದವು. ದ್ವಿತೀಯ ಪಿಯುನಿಂದ ಹಿಡಿದು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಇಲ್ಲಿ ಒರೆಗೆ ಹಚ್ಚಿದರು.
ಆನೆ ಸೇರಿ ವನ್ಯಜೀವಿಗಳಿಂದ ತೋಟಗಳನ್ನು ರಕ್ಷಿಸಿಕೊಳ್ಳಲು ಕೊಡಗು ಜಿಲ್ಲೆಯ ವಿದ್ಯಾರ್ಥಿ ಶ್ವೇತನ್ ಜಿ. ರೈ ತಯಾರಿಸಿದ್ದ ವೈಲ್ಡ್ ಆ್ಯನಿಮಲ್ ರಿಪ್ಪೆಲರ್ ಸಾಧನ ಗಮನ ಸೆಳೆಯಿತು.
ಪವನ ವಿದ್ಯುತ್‌ನ ಮೂಲಕ ಬ್ಯಾಟರಿ ಸಾಮರ್ಥ್ಯದ ಆಧಾರದಡಿ ನಿರ್ವಹಣೆಯಾಗುವ ಈ ಸಾಧನ ರಾತ್ರಿ ವೇಳೆ ಬೆಳಕು ಚೆಲ್ಲಲಿದ್ದು, ಅಲ್ಟ್ರಾಸೌಂಡ್ ಮೂಲಕ ವನ್ಯಜೀವಿಗಳಿಗೆ ಕಿರಿಕಿರಿ ಮಾಡಲಿದೆ. ವನ್ಯಜೀವಿಗಳು ಬಂದಲ್ಲಿ ಸಂದೇಶ ನೀಡಲಿವೆ ಎಂಬುದನ್ನು ಆತ ವಿವರಿಸಿದ.
ವಾಹನಗಳು ಉಗುಳುವ ಹೊಗೆ ದಟ್ಟಣೆ ನಿಯಂತ್ರಿಸಿ, ಮಾಲೀಕರಿಗೆ ಸಂದೇಶ ರವಾನಿಸಬಲ್ಲ ‘ಸ್ಮೋಕ್ ಸ್ಟಾಕರ್’ ಅನ್ನು ಕೇವಲ 750 ರೂ.ನಲ್ಲಿ ತಯಾರಿಸಿದ್ದೇನೆ ಎಂದು ದಾವಣಗೆರೆಯ ವಿ.ಜೆ.. ಜೀವನಾ ಹೇಳಿಕೊಂಡರು.
ಸೈಲೆನ್ಸರ್‌ಗಳಿಗೆ ಅಳವಡಿಸುವ ಈ ಸಾಧನವು, ರೂಪಿಸಲಾದ ಆ್ಯಪ್ ಮೂಲಕ ಹೊಗೆ ಪ್ರಮಾಣದ ಬಗ್ಗೆ ಸಂದೇಶ ಕಳಿಸಲಿದೆ. ಹೆಚ್ಚು ಜನರು ಬಳಸಿದಲ್ಲಿ ಇದರ ಬೆಲೆ 500 ರೂ.ಗೆ ಇಳಿಯಬಹುದು. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ತಡೆಯಬಹುದು ಎಂದು ವಿವರಿಸಿದ.
ದಕ್ಷಿಣ ಕನ್ನಡದ ಆರ್. ಸೂರ್ಯ, ರೈತರಿಗಾಗಿ ವಾಹನಗಳ ಮೇಲೆ ಸಾಗಿಸಬಲ್ಲ ಶೀತಲೀಕರಣ ಘಟಕದ ಮಾದರಿ ಅಲ್ಲಿತ್ತು. ಸರ್ವ ಋತುವಿನಲ್ಲೂ ಕನಿಷ್ಠ 3 ವಾರಗಳ ವರೆಗೂ ಫಂಗಸ್ ರಹಿತವಾಗಿ ಧಾನ್ಯ, ತರಕಾರಿ ಸಂಗ್ರಹಿಸಲು ಇದು ಸೂಕ್ತವಾಗಿದೆ. ಇದಕ್ಕೆ ಒನ್‌ಟೈಂ ಹಣ ತೊಡಗಿಸಿದರೆ 10 ವರ್ಷ ಬಳಸಬಹುದು ಎಂದು ಹೇಳಿದ.
ಸೋಲಾರ್ ಆಧಾರಿತ, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಘಟಕ ಪ್ರದರ್ಶಿಸಿದ ಬಳ್ಳಾರಿಯ ಹರ್ಷನ್ ಮತ್ತು ಅವರ ತಂಡದವರು ಇದರಿಂದ ಹಣ, ವಿದ್ಯುತ್ ಉಳಿತಾಯ ಮಾಡಬಹುದು ಎಂದರು. ವಿಜಯಪುರದ ವಿಜಯಕುಮಾರ್ ತಡಗಲಿ ತಂಡವು ತಮ್ಮ ಲೈ-ಫೈ ಸಾಧನವು ಇಂದಿನ ವೈಫೈಗಿಂತಲೂ ವೇಗವಾಗಿ ಸಂದೇಶ ಕಳಿಸಲಿದ್ದು ಇದನ್ನು ಸೇನಾ ಪಡೆಯಲ್ಲಿ ಬಳಸಬಹುದು ಎಂದರು.
ಬಾಗಲಕೋಟೆಯ ಸುನೀತಾ ಮುಗಜೋಳ್ ಅವರು ತಾವು ಪ್ರದರ್ಶಿಸಿದ ಹ್ಯೂಮನ್ ಫ್ರೆಂಡ್ಲಿ ಎಇಕೋ ಸಿಸ್ಟಂನಡಿ ರೋಗಿಗೆ ಹಾಕಿದ ಸಲೈಡ್, ರಕ್ತದ ಬಾಟಲಿ ಕೊನೆಯ ಹಂತದಲ್ಲಿದ್ದಾಗ ದಾದಿಯರ ಮೊಬೈಲ್‌ಗೆ ಸಂದೇಶ ಕಳಿಸಿ ಎಚ್ಚರಿಕೆ ನೀಡಲಿದೆ ಎಂದು ಮಾಹಿತಿ ನೀಡಿದರು.
ಮೈಸೂರಿನ ಆರ್. ಜಿ. ತೇಜು ತಂಡದವರು ಆಟೋಮೇಷನ್ ಸೆರ್ಸ್ ಇನ್ ಇಂಪ್ರೂವಿಂಗ್ ಸ್ಮಾರ್ಟ್‌ಸಿಟಿ, ಕಾರವಾರದ ಅಪೇಕ್ಷಾ ಟೀಂ- ಬಯೋ ಅರ್ಬನ್ ರೋಬಾಟಿಕ್ ಟ್ರೀ, ಶಿವಮೊಗ್ಗದ ಗೋವರ್ಧನ್ ಆಧುನಿಕ ಸೌದೆ ಒಲೆ, ಚಾಮರಾಜನಗರದ ಜಿ.ಎಂ, ಕಿಶೋರ್ ತಂಡದವರುಐವಿ ಡ್ರಿಪ್ ಮಾನಟರಿಂಗ್ ಸಿಸ್ಟಂ, ಉಡುಪಿಯ ಶುಭಾಂಗ ರಿಸ್ಕ್ ಫ್ರೀ ಹೆಲ್ಮೆಟ್, ಕಲಬುರಗಿಯ ಸೈಯದ್ ಅಬ್ಬಾಸ್ ಹೈದರ್-ರಿಮೋಟ್ ಕಂಟ್ರೋಲ್ಡ್ ಲೈಫ್ ಸೇವಿಂಗ್ ಬೆಲ್ಟ್ ಸೇರಿ ಅನೇಕ ಮಾದರಿಗಳಿದ್ದವು.
ಚಾಮರಾಜನಗರದ ದೀನಬಂಧು ಶಿಕ್ಷಕ ಸಂಪನ್ಮೂಲಕ ಕೇಂದ್ರದಿಂದ ಕಡಿಮೆ ವೆಚ್ಚದಲ್ಲಿ ತಯಾರಿಸಿದ, ಬೆಳಕಿನ ಪೆಟ್ಟಿಗೆ, ಸರಳ ಸೂಕ್ಷ್ಮದರ್ಶಕ, ವಿದ್ಯುತ್‌ಕಾಂತತ್ವಕ್ಕೆ ಸಂಬಂಧಿಸಿದ ಪರಿಕರಗಳು ಸೇರಿ 16 ಮಾದರಿಗಳನ್ನು ಪ್ರದರ್ಶನಕ್ಕೆ ಇರಿಸಿತ್ತು.
----