ದಾವಣಗೆರೆ: ದಾವಣಗೆರೆಯಲ್ಲಿ ನಾನೊಬ್ಬನೇ ಅಸಲಿ ‘ಬಿಜೆಪಿ’ಗ ಉಳಿದವರೆಲ್ಲ ನಕಲಿ ಎಂದು ದಿಲ್ಲಿಯಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ನೀಡಿದ್ದಾರೆನ್ನಲಾದ ಹೇಳಿಕೆ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಚನ್ನಗಿರಿ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ತಿರುಗಿಬಿದ್ದಿದ್ದಾರೆ.
ಲೋಕಸಭೆ ಚುನಾವಣೆ ಸೋಲು, ಸೋಲಿಗೆ ಕಾರಣವಾದ ಅಂಶಗಳು, ಮಾಡಾಳು ವಿರೂಪಾಕ್ಷಪ್ಪ ವಿರುದ್ಧದ ಪಿತೂರಿ ಹಾಗೂ ಸಿದ್ದೇಶ್ವರ ಕುಟುಂಬ ವ್ಯವಹಾರಗಳನ್ನು ಮುಂದಿಟ್ಟುಕೊಂಡು ಸೋಮವಾರ ಸುದ್ದಿಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಅದಿರು ಸೇರಿ ಬೇರೆ-ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸಿದ್ದೇಶ್ವರ ಕುಟುಂಬದ ವ್ಯವಹಾರಗಳ ಕುರಿತು ತನಿಖಾ ಸಂಸ್ಥೆಗಳಿಂದ ತನಿಖೆ ಆಗಬೇಕು ಎಂದು ಮಾಡಾಳು ಮಲ್ಲಿಕಾರ್ಜುನ್ ಆಗ್ರಹಿಸಿದರೆ, ಸ್ವಯಂಕೃತ ಅಪರಾಧದಿಂದ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರಿಂದ ದಾವಣಗೆರೆ ಬಿಟ್ಟು ಹೋಗಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಗುಡುಗಿದರು.
ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ. ತೂಕದಲ್ಲಿ ಮೋಸ ಮಾಡುತ್ತಿದ್ದೀರಿ. ಬೇಲೆಕೇರಿ ಮಾತ್ರವಲ್ಲ, ನಿಮ್ಮೂರಿನ ಸುತ್ತಮುತ್ತಲ ಅದಿರು ಲೂಟಿ ಮಾಡಿದ್ದೀರಿ ಎಂದು ಆರೋಪಿಸಿದರು.
ನಿಮ್ಮ ನಡವಳಿಕೆಯಿಂದ ಲೋಕಸಭಾ ಚುನಾವಣೆ ವೇಳೆ ಜನ ಬೇಸತ್ತಿದ್ದರು. ದಂಗೆ ಎದ್ದಾರು ಎಂಬ ಭಯದಿಂದ ನೀವು ಪ್ರಚಾರಕ್ಕೆ ಬರಲಿಲ್ಲ. ನಾವೇ ಜನರನ್ನು ಸಮಾಧಾನಪಡಿಸಿ ಮತಯಾಚಿಸಿದ್ದೇವೆ. ಆದರೂ ನಮ್ಮ ವಿರುದ್ಧ ವರಿಷ್ಠರಿಗೆ ಲಿಖಿತ ದೂರು ನೀಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮಾಜಿ ಸಚಿವ ರವೀಂದ್ರನಾಥ್ ಒಳಗೊಂಡು ನಮ್ಮನ್ನೆಲ್ಲ ನೀವು ನಕಲಿ ಎನ್ನುವುದಾದರೆ ಹಿಂದಿನ ಚುನಾವಣೆಗಳಲ್ಲಿ ನಮ್ಮನ್ನು ಏಕೆ ಬಳಸಿಕೊಂಡಿರಿ? ನಿಮ್ಮ ತಂದೆ ನಂತರ ಏಕೆ ರಾಜಕೀಯಕ್ಕೆ ಬಂದಿರಿ? ಬೇರೆಯವರಿಗೆ ಟಿಕೆಟ್ ತಪ್ಪಿಸಿ ದಾವಣಗೆರೆ ಉತ್ತರಕ್ಕೆ ಹಾಗೂ ಚನ್ನಗಿರಿ ಕ್ಷೇತ್ರಕ್ಕೆ ನಿಮ್ಮ ಕುಟುಂಬ ಸದಸ್ಯರನ್ನು ರಾಜಕೀಯಕ್ಕೆ ತರಲು ಮುಂದಾದ ನೀವು ಮಾತ್ರ ಒಳ್ಳೆಯವರಾ ಎಂದು ಪ್ರಶ್ನಿಸಿದರು.
ನಮ್ಮನ್ನು ರೇಣುಕಾಚಾರ್ಯ ಅವರ ಚೇಲಾ ಎನ್ನುವ ನೀವು ಯತ್ನಾಳ್, ಜಾರಕಿಹೊಳಿ ಚೇಲಾ ಎಂದು ದೂರಿದರು. ನನ್ನ ಹಾಗೂ ತಂದೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ವೀಡಿಯೋ ಹರಿಬಿಟ್ಟಿದ್ದೀರಿ. ನಾನು ಖಾಲಿ ಡಬ್ಬಾ ಅಲ್ಲ. ತುಂಬಿದ ಕೊಡ. ನನಗೂ ಎಲ್ಲ ಗೊತ್ತಿದೆ ಎಂದು ಎಚ್ಚರಿಸಿದರು.
ನನ್ನ ತಂದೆಯವರ ಸುದ್ದಿಗೆ ಬರಬೇಡಿ ಎಂದಿದ್ದಾಗ್ಯೂ ಶಾಸಕ ಬಿ.ಪಿ.ಹರೀಶ್ ತಲೆಹರಟೆ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಅವರಿಗೆ ಈಗಾಗಲೇ ತಕ್ಕ ಉತ್ತರ ನೀಡಿದ್ದೇನೆ. ಇನ್ನಾದರೂ ಸುಮ್ಮನಿರಲಿ ಎಂದರು.
ದಾವಣಗೆರೆ ಜಿಲ್ಲೆ ಬಿಟ್ಟು ಹೋಗಿ
ಜಿ.ಎಂ.ಸಿದ್ದೇಶ್ವರ ದಾವಣಗೆರೆ ಜಿಲ್ಲೆಯವರಲ್ಲ. ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದವರು. ನೀವಿಷ್ಟು ದಿನ ಇಲ್ಲಿ ರಾಜಕೀಯ ಮಾಡಿದ್ದು ಸಾಕು, ನಿಮ್ಮ ಸ್ವಂತ ಜಿಲ್ಲೆಗೆ ತೆರಳಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿ ಕಾರಿದರು.
ದಾವಣಗೆರೆಯಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರಿಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವವೇ ಇರಲಿಲ್ಲ. ಶಾಮನೂರು ಕುಟುಂಬದ ವಿರುದ್ಧ ಸ್ಪರ್ಧಿಸಲು ನಾನೊಬ್ಬನೇ ಗಂಡಸು ಎಂದು ಹೇಳುವ ಮೂಲಕ ಉಳಿದ ಲಕ್ಷಾಂತರ ಕಾರ್ಯಕರ್ತರ ಮನ ನೋಯಿಸಿದ್ದೀರಿ ಎಂದು ಆಕ್ಷೇಪಿಸಿದರು.
ದಾವಣಗೆರೆ ಲೋಕಸಭೆ ಚುನಾವಣೆ ಸೋಲಿಗೆ ಮಾಜಿ ಸಂಸದರ ಸ್ವಯಂಕೃತ ಅಪರಾಧ ಕಾರಣವೇ ಹೊರತು ನಾವ್ಯಾರೂ ಅಲ್ಲ. ಅವರದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾತಾಡಿದರೆ ದೊಡ್ಡ ನಾಯಕನಾಗುತ್ತೇನೆಂದು ಶಾಸಕ ಬಿ.ಪಿ.ಹರೀಶ್ ಭಾವಿಸಿದಂತಿದೆ. ಅವರು ಎರಡನೇ ಬಾರಿ ಶಾಸಕರಾಗಲು ಯಡಿಯೂರಪ್ಪ ಹಾಗೂ ಬಿಜೆಪಿ ಕಾರಣ ಎಂಬುದನ್ನು ಮರೆಯಬಾರದು ಎಂದರು.
2014 ರ ಚುನಾವಣೆ ವೇಳೆ ರಾತ್ರೋರಾತ್ರಿ ಕಾಂಗ್ರೆಸ್‌ಗೆ ಓಡಿ ಹೋಗುತ್ತಿದ್ದ ನಿಮ್ಮನ್ನು ವಾಪಸ್ ಕರೆತಂದವರು ನಾವು. ಲೋಕಸಭಾ ಚುನಾವಣೆ ಸೋಲಿಗೆ ನಾವು ಕಾರಣ ಎನ್ನುವುದಾದರೆ ನಿಮ್ಮ ಸ್ವಕ್ಷೇತ್ರ ಹರಿಹರದಲ್ಲಿ 5 ಸಾವಿರ ಮತಗಳು ಏಕೆ ಕಾಂಗ್ರೆಸ್ ಪಾಲಾದವು?ಕಾಂಗ್ರೆಸ್ ಹಣ ಪಡೆದಿರುವ ನೀವು ಭ್ರಷ್ಟರು ಎಂದು ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲೋಕಿಕೆರೆ ನಾಗರಾಜ್, ರಾಜು ವೀರಣ್ಣ, ಪ್ರವೀಣ್ ಜಾಧವ್, ರಾಜು ತೋಟಪ್ಪ, ಜಯರುದ್ರೇಶ್, ವೆಂಕಟೇಶ್, ಮೋಹನ್ ಇತರರಿದ್ದರು.