ದಾವಣಗೆರೆ: ವೃತ್ತಿ ರಂಗಭೂಮಿ ರಂಗಾಯಣದಿಂದ ನಗರದ ಬಾಪೂಜಿ ಸಭಾಂಗಣದಲ್ಲಿ ಸೆ.15ರಂದು 2024-25ನೇ ಸಾಲಿನ ರಂಗ ಚಟುವಟಿಕೆಗಳ ನಾಂದಿ-ಆರಂಭೋತ್ಸವ, ರಾಜ್ಯಮಟ್ಟದ ವಿಚಾರ ಸಂಕಿರಣ, ರಂಗಗೀತೆಗಳ ಗಾಯನ ಹಾಗೂ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.
ಭಾನುವಾರ ಬೆಳಗ್ಗೆ 10.30ಕ್ಕೆ ವರ್ತಮಾನದ ವೃತ್ತಿ ರಂಗಭೂಮಿ, ಬಿಕ್ಕಟ್ಟು ಮತ್ತು ಪರಿಹಾರದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಂಗಕರ್ಮಿಗಳಾದ ಎಲ್.ಬಿ. ಷೇಕ್ ಮಾಸ್ತರ ಅಧ್ಯಕ್ಷತೆ ವಹಿಸುವರು, ಸಿ. ಬಸವಲಿಂಗಯ್ಯ ದಿಕ್ಸೂಚಿ ನುಡಿಗಳನ್ನಾಡುವರು. ನಾಟಕ ಕಂಪನಿ ಪರಂಪರೆ ಮತ್ತು ಪ್ರಯೋಗಶೀಲತೆ ಕುರಿತು ಡಾ.ಪ್ರಕಾಶ ಗರುಡ, ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಬಸವರಾಜ ಬೆಂಗೇರಿ ಹಾಗೂ ರಂಗ ಪರಿಕರ ಮತ್ತು ರಂಗಸಜ್ಜಿಕೆ ಕುರಿತು ಅರುಣ್ ಸಾಗರ್ ಪ್ರಬಂಧ ಮಂಡಿಸಲಿದ್ದಾರೆ ಎಂದರು.
ಸಂಜೆ 4ಕ್ಕೆ ನಡೆಯುವ ನಾಂದಿ-ಆರಂಭೋತ್ಸವದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ಸಾನ್ನಿಧ್ಯ ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ನಾದಬ್ರಹ್ಮ ಹಂಸಲೇಖ ರಂಗಜ್ಯೋತಿ ಬೆಳಗಿಸುವರು.
ಶಾಸಕ ಕೆ.ಎಸ್. ಬಸವಂತಪ್ಪ, ಪಾಲಿಕೆ ಮೇಯರ್ ಬಿ.ಎಚ್. ವಿನಾಯಕ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್‌ಕುಮಾರ್ ಕೊಂಡಜ್ಜಿ, ಧಾರವಾಡ ರಂಗಾಯಣ ನಿರ್ದೇಶಕ ಡಾ.ರಾಜು ತಾಳಿಕೋಟೆ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಂಜೆ 6 ಗಂಟೆಗೆ ಪಂಡಿತ ಪುಟ್ಟರಾಜ ಗವಾಯಿಗಳ ರಚನೆ, ಮಹಾದೇವ ಹೊಸೂರು ನಿರ್ದೇಶನದ ‘ಅಕ್ಕ ಮಹಾದೇವಿ’ ನಾಟಕ ಪ್ರದರ್ಶನ ನಡೆಯಲಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ಎಸ್‌ಪಿ ಉಮಾ ಪ್ರಶಾಂತ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸರ್ಕಾರ ರಂಗಾಯಣಕ್ಕೆ ಕೊಂಡಜ್ಜಿಯಲ್ಲಿ 10 ಎಕರೆ ಜಮೀನು ನೀಡಿದ್ದು, ಅಲ್ಲಿ ರಂಗಭೂಮಿಗೆ ಸಂಬಂಧಿಸಿದ ರಾಜ್ಯಮಟ್ಟದ ಮ್ಯೂಸಿಯಂ ಸ್ಥಾಪಿಸುವ ಉದ್ದೇಶವಿದೆ. ಶಾಲಾ ಕಾಲೇಜುಗಳಲ್ಲಿ ರಂಗ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ರಂಗಾಯಣ ವಿಶೇಷಾಧಿಕಾರಿ ರವಿಚಂದ್ರ, ಕಲಾವಿದ ನೀಲಗುಂದ ಬಸವನಗೌಡ ಸುದ್ದಿಗೋಷ್ಠಿಯಲ್ಲಿದ್ದರು.