ದಾವಣಗೆರೆ: ಕೈಮಗ್ಗದಿಂದ ತಯಾರಿಸಿದ ಸೀರೆ, ವಸ್ತ್ರಗಳಿಗೆ ಉತ್ತಮ ಬೇಡಿಕೆ ಇದೆ. ಸ್ವಕುಳಸಾಳಿ ಸಮಾಜ ಬಯಸಿದರೆ ಇದಕ್ಕೆ ಹೆಚ್ಚು ಉತ್ತೇಜನ ನೀಡಲು ಯೋಜನೆ ರೂಪಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಸದ್ಯೋಜಾತ ಶಿವಾಚಾರ್ಯ ಹಿರೇಮಠದಲ್ಲಿ ಸ್ವಕುಳಸಾಳಿ ಸಮಾಜದಿಂದ ಶನಿವಾರ ಹಮ್ಮಿಕೊಂಡಿದ್ದ ಭಗವಾನ್ ಜಿಹ್ವೇಶ್ವರ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಇಳಕಲ್ ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದೇನೆ. ನೇಕಾರಿಕೆಯೇ ಸ್ವಕುಳಸಾಳಿ ಸಮುದಾಯದ ಮೂಲ ಕಸುಬಾಗಿದೆ. ನೇಕಾರರು ಸಮಸ್ಯೆಗಳ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಧ್ವನಿ ನೀಡಲಾಗುವುದು ಎಂದು ಹೇಳಿದರು.
ಕವಡೆ, ಗಾಜು ಇತರೆ ಸಾಮಗ್ರಿ ಬಳಸಿ ಲಂಬಾಣಿ ಮಹಿಳೆಯರು ಕೂಡ ಹೊಸ ವಿನ್ಯಾಸದ ಉಡುಪುಗಳನ್ನು ತಯಾರಿಸುತ್ತಿದ್ದು ಅವರ ಉತ್ಪನ್ನಗಳ ಪ್ರದರ್ಶನ, ಮಾರಾಟ ದೃಷ್ಟಿಯಿಂದ ಕಾರ್ಯಾಗಾರ ಆಯೋಜಿಸುವ ಉದ್ದೇಶವಿದೆ. ನೇಕಾರಿಕೆ ಉತ್ಪನ್ನಗಳಿಗೂ ಇಂತಹ ಪೋತ್ಸಾಹ ನೀಡಲಾಗುವುದು ಎಂದರು.
ರಸಗುಲ್ಲಾ ಉತ್ಪನ್ನ ತಮ್ಮದೆಂದು ಮಾನ್ಯತೆ ಪಡೆಯಲು ಓರಿಸ್ಸಾ, ಪಶ್ಚಿಮ ಬಂಗಾ ರಾಜ್ಯಗಳು ಹೆಣಗಾಡುತ್ತಿವೆ. ದಾವಣಗೆರೆ ಜಿಲ್ಲೆಯಲ್ಲಿ ಬೆಣ್ಣೆದೋಸೆಗೆ ಪ್ರಾಮುಖ್ಯ ಸಿಗಬೇಕಿದ್ದು ಈ ಸಂಬಂಧ ಜಿಯೋ ಟ್ಯಾಗ್‌ಗಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದೇನೆ. ಈ ಸಂಬಂಧ ಅಗತ್ಯ ದಾಖಲಾತಿ ನೀಡುವುದು ಬಾಕಿ ಇದೆ ಎಂದು ತಿಳಿಸಿದರು.
ಸ್ವಕುಳಸಾಳಿ ಸಮಾಜಕ್ಕೆ ಅಗತ್ಯ ಸರ್ಕಾರಿ ನಿವೇಶನ ನೀಡುವ ಸಂಬಂಧ ಶಾಸಕರ ಜತೆ ಚರ್ಚಿಸುವುದಾಗಿಯೂ ಅವರು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಜಡೇಸಿದ್ದ ಶಿವಯೋಗೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಕಡಿಮೆಯಾಗಿದೆ. ಹಣೆಗೆ ಕುಂಕುಮ ಬದಲಿಗೆ ಟಿಕ್ಕಲಿ ಹಚ್ಚಲಾಗುತ್ತಿದೆ. ಅಸುರ ಗುಣಗಳು ಮನೆಗೆ ಪ್ರವೇಶಿಸದಿರಲು ರಂಗೋಲಿ ಹಾಕುವ ವ್ಯವಸ್ಥೆ ಮಾಯವಾಗಿ ಅದರ ಜಾಗವನ್ನು ಪೇಂಟ್ ಆಕ್ರಮಿಸಿದೆ ಎಂದು ವಿಷಾದಿಸಿದರು.
ಸಂಘದ ಅಧ್ಯಕ್ಷ ಮೋಹನ್ ಪಿ. ಗಾಯಕವಾಡ್ ಅಧ್ಯಕ್ಷತೆ ವಹಿಸಿದ್ದರು. ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಾಜಿ ಅಧ್ಯಕ್ಷ ಮಾಲತೇಶರಾವ್ ಜಾಧವ್, ವೃತ್ತಿಪರ ಪತ್ರಬರಹಗಾರರ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆ. ಸಂಗಮೇಶ್, ಪದಾಧಿಕಾರಿಗಳಾದ ಕಾವೇರಿ, ಧರ್ಮರಾಜ್ ವಿ.ಏಕಬೋಟೆ, ಗಣೇಶ ಕ್ಷೀರಸಾಗರ ಇತರರಿದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ-ಪಿಯುನ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ನಗರದಲ್ಲಿ ಮೆರವಣಿಗೆ ನಡೆಸಲಾಯಿತು.