ದಾವಣಗೆರೆ: ರಾಜ್ಯ ಸರ್ಕಾರ ಛಾಯಾಚಿತ್ರಗ್ರಾಹಕರ ಸೇವಾ ಕಾರ್ಯವನ್ನು ಗುರುತಿಸಿ ಶೀಘ್ರವೇ ಫೋಟೋಗ್ರಾಫರ್ಸ್ ಅಕಾಡೆಮಿ ಸ್ಥಾಪಿಸಬೇಕೆಂದು ದಾವಣಗೆರೆ ತಾಲೂಕು ಫೋಟೋ ಮತ್ತು ವೀಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ಎಂ. ಮನು ಆಗ್ರಹಿಸಿದ್ದಾರೆ.
ಛಾಯಾಚಿತ್ರಗ್ರಾಹಕರ ಕುಟುಂಬಕ್ಕೆ ನೆರವಾಗುವಂತೆ ಸವಲತ್ತುಗಳನ್ನು ನೀಡಬೇಕು. ಅವರ ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಆಶ್ರಯ ಮನೆ ಅಥವಾ ನಿವೇಶನ ನೀಡಬೇಕು. ಛಾಯಾಗ್ರಾಹಕರ ಕಾಲನಿ ನಿರ್ಮಾಣ ಮಾಡಬೇಕೆಂದು ಶುಕ್ರವಾ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕರ್ನಾಟಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಜಾರಿಗೊಳಿಸುತ್ತಿದೆ. ಇದರಲ್ಲಿ ಸುಮಾರು 23 ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ಸಹಜ ಮರಣ ಪರಿಹಾರ ಸೌಲಭ್ಯಗಳನ್ನು ಪಡೆಯಲು ಸಹಕಾರ ನೀಡಿದೆ. ಯೋಜನೆಯಡಿ ಛಾಯಾಚಿತ್ರಗ್ರಾಹಕರನ್ನು ಸೇರ್ಪಡೆ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದರು.
ಸರ್ಕಾರದಿಂದ ಛಾಯಾಗ್ರಾಹಕರಿಗೆ ಅತಿ ಶೀಘ್ರದಲ್ಲೇ ಸ್ಮಾರ್ಟ್‌ಕಾರ್ಡ್ ವಿತರಿಸುವುದಾಗಿ ಕಾರ್ಮಿಕ ಅಧಿಕಾರಿಗಳು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಂಘದ ಕೃತಜ್ಞತೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಯೋಜನೆಯಡಿ ಸಿಗುವ ಸೌಲಭ್ಯಗಳು, ಲಾಭದ ಕುರಿತಂತೆ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಸಂಘದ ಕಚೇರಿ, ಮನು ಫೋಟೋಗ್ರಫಿ ಇವೆಂಟ್ಸ್, ಎರಡನೆ ಮುಖ್ಯರಸ್ತೆ, ವಿನೋಬನಗರ ದಾವಣಗೆರೆ, ಮೊ.ಸಂ. 9448339151 ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ತಾಲೂಕು ಗೌರವಾಧ್ಯಕ್ಷ ಬಿ. ಮಂಜುನಾಥ್, ಕೆ.ದೇವೇಂದ್ರಪ್ಪ, ಕೊಂಡಜ್ಜಿ ಎಸ್. ರಾಜಶೇಖರ್, ಡಿ. ರಮೇಶ್, ಡಿ. ರಂಗನಾಥ್ ಇತರರಿದ್ದರು.