ದಾವಣಗೆರೆ: ವಿದ್ಯಾರ್ಥಿಗಳು ಆತ್ಮವಿಶ್ವಾಸದ ಕೊರತೆಯಿಂದ ಕೆಟ್ಟ ವ್ಯಸನಗಳಿಗೆ ದಾಸರಾಗುತ್ತಿರುವುದು ಸಾಮಾಜಿಕ ದುರಂತ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಬಿ.ಡಿ. ಕುಂಬಾರ ಹೇಳಿದರು.
ಡಾ. ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನೆ ವಿಭಾಗದಿಂದ ದಾವಣಗೆರೆ ವಿವಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಂತೋಷ ಹಾಗೂ ದುಃಖದ ಹೆಸರಿನಲ್ಲಿ ಅಮಲಿನ ವ್ಯಸನಕ್ಕೆ ದಾಸರಾಗಿ ಅಮೂಲ್ಯ ಜೀವನ ಹಾಗೂ ಸಮಯ ವ್ಯರ್ಥ ಮಾಡುತ್ತಿರುವುದು ಸರಿಯಲ್ಲ. ಉತ್ತಮ ಹವ್ಯಾಸ ರೂಢಿಸಿಕೊಂಡು ಆದರ್ಶ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಶ್ರೀ ಮಹಾಂತ ಶಿವಯೋಗಿಗಳು ತ್ರಿವಿಧ ದಾಸೋಹದ ಜತೆಗೆ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮಾಡಿದ ಕಾರ್ಯಗಳು ಅವಿಸ್ಮರಣೀಯ ಎಂದು ಸ್ಮರಿಸಿದರು.
ವೈದ್ಯ ಡಾ.ಬಿ. ಹಾಲೇಶ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಬಳಸುವುದರಲ್ಲೇ ತಮ್ಮ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ. ಇದರಿಂದ ಮೆದುಳು ಸಂಬಂಧಿತ ಕಾಯಿಲೆಗೆ ಗುರಿಯಾಗುತ್ತಿರುವುದು ಆತಂಕಕಾರಿ ವಿಷಯ ಎಂದರು.
ಧೂಮಪಾನ ಹಾಗೂ ಮದ್ಯಪಾನದಿಂದ ದೇಹದ ಎಲ್ಲ ಭಾಗಗಳು ರೋಗಗ್ರಸ್ತವಾಗುತ್ತವೆ. ಜಾಗತೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ವ್ಯಸನಗಳಿಂದ ದೂರವಿರದ ಹೊರತು ಉತ್ತಮ ಭವಿಷ್ಯ ಸಾಧ್ಯವಿಲ್ಲ, ಉತ್ತಮ ಕೆಲಸ, ಆಲೋಚನೆ, ಸಂಸ್ಕೃತಿಯಿಂದ ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದು ತಿಳಿಸಿದರು.
ಕುಲಸಚಿವ ಪ್ರೊ.ಯು.ಎಸ್. ಮಹಾಬಲೇಶ್ವರ, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ ಹಾಗೂ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಅಶೋಕ್ ಕುಮಾರ್ ವಿ. ಪಾಳೇದ, ಕಾರ್ಯಕ್ರಮ ಅಧಿಕಾರಿ ಡಾ. ಬಿ.ಕೆ. ಸಿದ್ದಪ್ಪ ಇದ್ದರು.