ಜಿಲ್ಲೆ

ಆಸನ ನಿತ್ಯದ ಜೀವನಕ್ರಮವಾಗಲಿ   ಯೋಗ ದಿನಾಚರಣೆಯಲ್ಲಿ ಡಾ. ಶಿವಮೂರ್ತಿ ಶ್ರೀಗಳ ಆಶಯ

ಡಿ. ಎಂ. ಮಹೇಶ್

ದಾವಣಗೆರೆ: ಶರೀರ ಮತ್ತು ಮನಸ್ಸನ್ನು ಪಳಗಿಸುವುದೇ ಯೋಗದ ಮುಖ್ಯ ಗುರಿ. ಹಾಗಾಗಿ ಅಂತಾರಾಷ್ಟ್ರೀಯ ಯೋಗ ದಿನ ವರ್ಷಕ್ಕೊಮ್ಮೆ ಆಚರಣೆ ಆದರೆ ಸಾಲದು. ಅದು ಎಲ್ಲರ ನಿತ್ಯದ ಜೀವನಕ್ರಮವಾಗಬೇಕು ಎಂದು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾರೀರಿಕ, ಮಾನಸಿಕ, ಕೌಟುಂಬಿಕ ಹಾಗೂ ಸಾಮಾಜಿಕ ಜೀವನದಲ್ಲಿ ಮನಸ್ಸು ಮುಖ್ಯ ಪಾತ್ರ ವಹಿಸಲಿದೆ. ಮನಸ್ಸು ಹತೋಟಿಯಲ್ಲಿದ್ದಲ್ಲಿ, ಪತ್ರಿಕೆಗಳಲ್ಲಿ ವರದಿಯಾಗುತ್ತಿರುವ ಅನಾಹುತ ಕಾರ್ಯಗಳು ಆಗುತ್ತಿರಲಿಲ್ಲ. ಯೋಗ ಎಂಬುದು ಸ್ವಯಂ ಶಿಸ್ತು. ಯೋಗ ಒಂದು ದಿನದ ಆಚರಣೆಯಾಗದೆ ನಿತ್ಯಾಭ್ಯಾಸ ಆಗಬೇಕು ಎಂದು ಹೇಳಿದರು.
ಷಡ್‌ದರ್ಶನಗಳಲ್ಲಿ ಯೋಗವೂ ಒಂದಾಗಿದೆ. ಇದರಲ್ಲಿ ಯಮ ನಿಯಮ, ಆಸನ, ಪ್ರಾಣಾಯಾಮ ಸೇರಿ 8 ಸ್ತರಗಳಿವೆ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹ ಈ ಐದೂ ಯಮಗಳ ಪಾಲಿಸಿದಲ್ಲಿ ಜಗತ್ತಿನಲ್ಲಿ ಸಂಘರ್ಷ ಇರದು ಎಂದು ತಿಳಿಸಿದರು.
ಮನಸ್ಸು ಹಾವು, ನಾಯಿಬಾಲದಂತೆ
ಶರೀರ ಎಂಬ ಹಾವಿನಬುಟ್ಟಿಯಲ್ಲಿ ಮನಸ್ಸೆಂಬ ಹಾವು ಅಡಗಿದೆ. ಹಾವಾಡಿಗ, ಹಾವನ್ನು ಹತೋಟಿಯಲ್ಲಿ ಇರಿಸುವಂತೆಯೇ ನಾವೂ ಈ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಬೇಕು. ಬಂಧನ ಮತ್ತು ಮುಕ್ತಿಗೂ ಮನಸ್ಸೇ ಮೂಲ ಕಾರಣವಾಗಿದೆ. ದೈನಂದಿನ ವ್ಯವಹಾರ ಹಾಗೂ ಚಟುವಟಿಕೆಗಳಲ್ಲಿ ಬರುವ ಕಷ್ಟಗಳು ತಿಳಿಯಾಗಲು ಸಮಯ ಬೇಕು ಎಂದರು.
ಮನಸ್ಸೆಂಬುದು ನಾಯಿಬಾಲದಂತೆ. ಬಾಲದ ಬದಲಾಗಿ ನಾಯಿಯೇ ಅಲುಗಾಡಿದರೆ ಕುತೂಹಲ ಮೂಡುತ್ತದೆ. ಹಾಗಾಗಿ ನಮ್ಮಮ ಮನಸ್ಸನ್ನು ನಾವು ಆಡಿಸಬೇಕು. ಅದು ನಮ್ಮನ್ನು ಆಟವಾಡಿಸಲು ಬಿಡಬಾರದು ಎಂದು ಸೂಕ್ಷ್ಮವಾಗಿ ಹೇಳಿದರು.
ಆಸನಗಳು ಖುಷಿ ನೀಡಬೇಕು
ಯಾವುದೇ ಆಸನಗಳು ಕಸರತ್ತಿನ ಕೊಸರಾಟ ಆಗಬಾರದು, ಖುಷಿಯಿಂದ ಮಾಡುವಂತೆ ಆಗಬೇಕು. ಯೋಗದಿಂದ ಸ್ಥಿರತೆ ಬರಬೇಕು. ಇಂದಿನ ಯುವ ಸಮೂಹ ಒತ್ತಡದಿಂದ  ಮಾನಸಿಕ ತೊಳಲಾಟಕ್ಕೆ ಒಳಗಾಗುತ್ತಾರೆ. ಮೊಬೈಲ್‌ನಿಂದಾಗಿ ಒತ್ತಡವಾಗಲಿದೆ. ಯುವ ದಂಪತಿಗಳಿಗೂ ಇದು ದೊಡ್ಡ ಸಮಸ್ಯೆಯೇ ಆಗಿದೆ. ಅದರ ಬಳಕೆಯಂತೆಯೇ ಅದರ ಅನುಕೂಲತೆ ತಿಳಿಯಲಿದೆ. ದೋಷವಿರುವುದು ನಮ್ಮಲ್ಲೇ ಹೊರತು ಮೊಬೈಲ್‌ನಲ್ಲಲ್ಲ ಎಂದೂ ಹೇಳಿದರು.
195 ಸಂಖ್ಯೆಯ ಯೋಗಾಯೋಗ
ಭಾರತದಲ್ಲಿ ಸಾವಿರಾರು ವರ್ಷದಿಂದ ಯೋಗ ಪ್ರಚಲಿತವಾಗಿದೆ. ಇಂದು ಯೋಗ ದಿನ ಆಚರಣೆಗೆ ಬೆಂಬಲಿಸುವ ವಿಶ್ವದ 195 ರಾಷ್ಟ್ರಗಳಿವೆ. ಕ್ರಿಸ್ತಪೂರ್ವದಲ್ಲಿ ಪತಂಜಲಿ ಶ್ರೀಗಳು ಸಾರಿದ ಯೋಗದ ಸೂತ್ರಗಳ ಸಂಖ್ಯೆಯೂ 195 ಎಂಬುದು ಯೋಗಾಯೋಗ. ಪ್ರತಿ ಸೂತ್ರವೂ ಒಂದೊಂದು ದೇಶದ ಪ್ರತೀಕವಾಗಿದೆ ಎಂದು ಪ್ರತಿಪಾದಿಸಿದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ ಆಧುನಿಕ ಜೀವನಶೈಲಿಯಿಂದ ಬರುವ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ ತಡೆಯಲು ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಸಹಕಾರಿಯಾಗಿದೆ. ಬಾಲ್ಯಾವಸ್ಥೆಯಲ್ಲೇ ಯೋಗದ ಮೌಲ್ಯ ತಿಳಿಸಿದಲ್ಲಿ ಏಕಾಗ್ರತೆ ಕೊರತೆ ನೀಗಬಹುದು. ಮಕ್ಕಳಲ್ಲಿ ಇಂದು ಒತ್ತಡಗಳ ಜತೆಗೆ ಮೊಬೈಲ್ ವ್ಯಸನವೂ ಹೆಚ್ಚಿದೆ. ಇದನ್ನು ಯೋಗ-ಧ್ಯಾನದ ಮೂಲಕ ನಿಯಂತ್ರಣ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಮಾತನಾಡಿ, ಯೋಗ ಎಂಬುದು ಸಮಯ ಪರೀಕ್ಷಿತ ಜ್ಞಾನವಾಗಿದೆ. ಇಂದಿನ ತಲ್ಲಣದ ಸಮಾಜವನ್ನು ಶಾಂತಗೊಳಿಸಲು ಯೋಗ ಪರಿಣಾಮಕಾರಿ ಅಸ್ತ್ರವಾಗಿದೆ. ಯೋಗದಿಂದ ವೈಯಕ್ತಿಕ ಆರೋಗ್ಯವಂತರಾಗುವ ಜತೆಗೆ ದೇಶವನ್ನೂ ಸದೃಢಗೊಳಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆಯುಷ್ ಇಲಾಖೆ, ಮಹಾನಗರ ಪಾಲಿಕೆ, ಪ್ರಜಾಪಿತ ಬ್ರಹ್ಮಕುಮಾರಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉದ್ಯಮಿ ಬಿ.ಸಿ. ಉಮಾಪತಿ, ಬ್ರಹ್ಮಕುಮಾರಿ ಗೀತಾ, ಎಸ್ಪಿ ಉಮಾ ಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಎಡಿಸಿ ಪಿ.ಎನ್. ಲೋಕೇಶ್, ತಹಸೀಲ್ದಾರ್ ಡಾ.ಬಿ.ಎನ್. ಅಶ್ವಥ್, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಡಿಎಚ್‌ಒ ಡಾ.ಎಚ್.ಷಣ್ಮುಖಪ್ಪ, ಜಿಲ್ಲಾ ಆಯಷ್ ಅಧಿಕಾರಿ ಡಾ.ಯೋಗೇಂದ್ರ, ವಿವಿಧ ಇಲಾಖಾಧಿಕಾರಿಗಳಾದ ಡಾ. ಚಂದ್ರಶೇಖರ ಸುಂಕದ್, ನಾಗರಾಜ್, ಜಿ. ಕೊಟ್ರೇಶ್, ನಿವೃತ್ತ ಅಧಿಕಾರಿ ಡಾ. ಸಿದ್ದೇಶಿ ಇತರರಿದ್ದರು.
ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ವಿವರಣೆ
ಹುಬ್ಬಳ್ಳಿಯ ಶ್ರೀ ಗಂಗಾ ಆರೋಗ್ಯ ಮಹಾಮನೆಯ ಸಂಸ್ಥಾಪಕ ವೈದ್ಯಶ್ರೀ ಚನ್ನಬಸವಣ್ಣ ಅವರು ಅತಿಥಿಗಳು ಸೇರಿ ಯೋಗಪಟುಗಳಿಗೆ ವಿವಿಧ ಯೋಗ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು. ಪೂರ್ಣ ಉಷ್ಟ್ರಾಸನ, ಉತ್ತಾನ ಪಾದಾಸನ, ಮಕರಾಸನ, ಅರ್ಧ ಪದ್ಮಾಸನ, ಪವನ ಮುಕ್ತಾಸನ, ಸೇತು ಬಂಧಾಸನ, ಶಿವಾಸನ ಸೇರಿ ಹಲವಾರು ಆಸನಗಳ ಕುರಿತಾದ ಮಾಹಿತಿ ಹಾಗೂ ಅದರಿಂದಾಗುವ ಆರೋಗ್ಯ ಲಾಭಗಳ ಕುರಿತಂತೆ ವಿವರಿಸಿದರು. ಸಾವಿರಾರು ಯೋಗಪಟುಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯೋಗ ಸಮಿತಿಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.