ಜಿಲ್ಲೆ

ಶರಣ ಸಾಹಿತ್ಯ ಪರಿಷತ್ತಿನ ವಾರ್ಷಿಕ ಮಹಾಸಭೆ ನಾಳೆ

ಡಿ. ಎಂ. ಮಹೇಶ್

ದಾವಣಗೆರೆ: ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಸರ್ವ ಸದಸ್ಯರ 30ನೇ ವಾರ್ಷಿಕ ಮಹಾಸಭೆ, ಸೆ. 15ರಂದು ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆಯಲಿದೆ.
ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ದಾವಣಗೆರೆ ಜಿಲ್ಲೆಗೆ ಮೊದಲನೇ ಬಾರಿಗೆ ಮಹಾಸಭೆ ಆತಿಥ್ಯ ದೊರೆತಿದೆ. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸಭೆಯನ್ನು ಉದ್ಘಾಟಿಸುವರು ಎಂದು ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಷತ್ತಿನ ರಾಜ್ಯ ಗೌರವಾಧ್ಯಕ್ಷ, ಸುತ್ತೂರಿನ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಗದಗ್‌ನ ಶ್ರೀ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಪಾಂಡೋಮಟ್ಟಿಯ ಶ್ರೀ ಡಾ. ಗುರುಬಸವ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸುವರು. ಗೌರವ ಸಲಹೆಗಾರ ಗೋ.ರು. ಚನ್ನಬಸಪ್ಪ, ರಾಜ್ಯ ಕದಳಿ ಮಹಿಳಾ ವೇದಿಕೆ ಸಂಚಾಲಕಿ ಸುಶೀಲಾ ಸೋಮಶೇಖರ್ ಭಾಗವಹಿಸುವರು ಎಂದು ವಿವರಿಸಿದರು.
ಮಹಾಸಭೆಯಲ್ಲಿ ಪರಿಷತ್ತಿನ ವಾರ್ಷಿಕ ಲೆಕ್ಕಪತ್ರ ಮಂಡನೆಯಾಗಲಿದೆ. ನಂತರ ವಿವಿಧ ಗೊತ್ತುವಳಿಗಳ ನಿರ್ಣಯ, ಅಧ್ಯಕ್ಷರ ಅಪ್ಪಣೆ ಮೇರೆಗೆ ವಿವಿಧ ವಿಚಾರಗಳು ಚರ್ಚೆಯಾಗಲಿವೆ. ಪರಿಷತ್ತಿನ ಎಲ್ಲ ಆಜೀವ ಸದಸ್ಯರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಸೆ. 14ರ ಸಂಜೆ 7 ಗಂಟೆಗೆ ಪರಿಷತ್ತಿನ ವಿವಿಧ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದ ಅವರು, ಬಸವಾಸಿ ಶಿವಶರಣರ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಿಳಿಸುವ ದಿಸೆಯಲ್ಲಿ ಶಸಾಪ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿ 16500, ಜಿಲ್ಲೆಯಲ್ಲಿ 1500 ಆಜೀವ ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ 800 ದತ್ತಿನಿಧಿ ಸಂಗ್ರಹಿಸಿ ಕಾಲಕಾಲಕ್ಕೆ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗೌರವ ಸಲಹೆಗಾರ ಎಚ್. ಕೆ.ಲಿಂಗರಾಜ್, ಸದಸ್ಯರಾದ ಡಾ. ಶಿವರಾಜ್ ಕಬ್ಬೂರು, ಲಿಂಗಾನಂದ ಕಮ್ಮತ್ತಹಳ್ಳಿ, ಭರಮಪ್ಪ ಮೈಸೂರು, ಆರ್.ಸಿದ್ದೇಶಪ್ಪ, ಬಿ.ಟಿ. ಪ್ರಕಾಶ್, ಜಿ.ಎಂ. ಕುಮಾರಪ್ಪ, ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ ಇದ್ದರು.
---