ದಾವಣಗೆರೆ: ನ್ಯಾಯಾಲಯಗಳತ್ತ ಬರುವ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಜತೆಗೆ ಹೆಚ್ಚು ಪ್ರಕರಣಗಳ ವಿಲೇಗೆ ನ್ಯಾಯಾಧೀಶರ ಜತೆಗೆ ವಕೀಲರು ಹೆಚ್ಚು ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ದಾವಣಗೆರೆ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿರುವ ನೂತನ ನ್ಯಾಯಾಧೀಶರಿಗೆ ಸೋಮವಾರ, ವಕೀಲರ ಸಂಘದಿಂದ ಜಿಲ್ಲಾ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂರು ವರ್ಷದಿಂದ ದಾವಣಗೆರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ವಕೀಲರ ಸಹಕಾರ ಉತ್ತಮವಾಗಿದೆ. ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರ ಅಹವಾಲು ಆಲಿಸಿ, ಅವರಿಗೆ ಸೂಕ್ತ ಮಾರ್ಗದರ್ಶನದ ಜತೆಗೆ ನ್ಯಾಯ ಕೊಡಿಸುವಲ್ಲಿ ಮುಂದಾಗಿದ್ದಾರೆ. ಹೆಚ್ಚಿನ ನ್ಯಾಯದಾನಗಳಲ್ಲಿ ಉತ್ತಮ ಬೆಂಬಲ ದೊರೆತಿದೆ ಎಂದು ಹೇಳಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ಮಾತನಾಡಿ, ನ್ಯಾಯಾಧೀಶರು, ನ್ಯಾಯವಾದಿಗಳು ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರ ಹಕ್ಕು, ಕರ್ತವ್ಯಕ್ಕೆ ಚ್ಯುತಿಯಾದ ಸಂದರ್ಭಗಳಲ್ಲಿ ಪರಸ್ಪರ ಬೆಂಬಲ ನೀಡುವುದು ಅಗತ್ಯವಿದೆ. ನ್ಯಾಯಾಧೀಶರ ಗೌರವಕ್ಕೆ ಧಕ್ಕೆಯಾಗದಂತೆ ನಡೆಯಬೇಕು ಎಂದು ತಿಳಿಸಿದರು.
ಜಿಲ್ಲೆಗೆ ವರ್ಗಾವಣೆಯಾಗಿ ಬಂದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಮಕ್ಕಳಸ್ನೇಹಿ ಕೋರ್ಟ್ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ, ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗರೆ, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಎಲ್.ಅಮರ್, 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿ.ನಾಗೇಶ್ ಅವರು ಅನಿಸಿಕೆ ಹಂಚಿಕೊಂಡರು.
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್.ಪ್ರವೀಣ್‌ಕುಮಾರ್, ನ್ಯಾಯಾಧೀಶರಾದ ನಿವೇದಿತಾ, ರೇಷ್ಮಾ, ಗಾಯತ್ರಿ ಪ್ರಶಾಂತ್, ಮಲ್ಲಿಕಾರ್ಜುನ, ಸಿದ್ದರಾಜು, ನಾಜೀಯಾ ಕೌಸರ್, ಮಹಾವೀರ ಕರೆಣ್ಣವರ, ವಕೀಲರ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಎಂ.ಚೌಡಪ್ಪ, ಟಿ.ಎಚ್.ಮಧುಸೂದನ್ ಇತರರಿದ್ದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳು ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಬಸವರಾಜ್ ವಂದಿಸಿದರು.
---