ಜಿಲ್ಲೆ

ದುರಭ್ಯಾಸ ಬಿಡಿ ಹೃದಯ ಪವಿತ್ರವಾಗಿಸಿ   ಚಿತ್ರನಟಿ ಅದಿತಿ ಪ್ರಭುದೇವ ಅನಿಸಿಕೆ  ದಾವಣಗೆರೆಯಲ್ಲಿ ವಾಕಥಾನ್ ಕಳೆ

ಡಿ. ಎಂ. ಮಹೇಶ್

ದಾವಣಗೆರೆ: ಮುಖದಲ್ಲಿ ಸದಾ ನಗುವಿರಲಿ. ಕೆಟ್ಟದಾದ ಆಲೋಚನೆ, ಆಹಾರಕ್ರಮ ಮತ್ತು ಅಭ್ಯಾಸ ಕೈಬಿಡುವ ಮೂಲಕ ಹೃದಯವನ್ನು ಪವಿತ್ರವಾಗಿಯೂ ಹಾಗೂ ಆರೋಗ್ಯವಾಗಿರಿಸಿ..
ಚಿತ್ರನಟಿ ಅದಿತಿ ಪ್ರಭುದೇವ ಅವರು ನೀಡಿದ ಸಂದೇಶವಿದು. ವಿಶ್ವ ಹೃದಯ ದಿನದ ಅಂಗವಾಗಿ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆ ವತಿಯಿಂದ ಹೃದಯ ಆರೋಗ್ಯ ಕಾಳಜಿಯ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಜೀವನಶೈಲಿ ಬದಲಾಗಬೇಕು. ಸದಾ ನಗುನಗುತ್ತ ಜೀವನ ಮಾಡಿದರೆ ಆರೋಗ್ಯ-ಆಯಸ್ಸು ವೃದ್ಧಿಯಾಗಲಿದೆ. ಸಸ್ಯಾಹಾರ ರೂಢಿಸಿಕೊಂಡಲ್ಲಿ ಆರೋಗ್ಯ ಕಾಣಬಹುದು. ಮಿತಾಹಾರ ಸೇವನೆಯಿಂದ ದೇಹದಲ್ಲಿ ಬದಲಾವಣೆ ಕಾಣಬಹುದು ಎಂದರು.
ಎಲ್ಲ ವೃತ್ತಿ ಮಾಡುವವರಲ್ಲೂ ಒತ್ತಡ ಎಂಬ ಪದ ಸಾಮಾನ್ಯವಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ‘ಹಿಂದೆ ಆಗಿದ್ದು ಒಳಿತಾಗಿದೆ, ಮುಂದೆಯೂ ಒಳ್ಳೆಯದಾಗಲಿದೆ’ ಎಂಬ ಮನಸ್ಥಿತಿ ಕಾಯ್ದುಕೊಂಡಲ್ಲಿ ಜೀವನ ಸುಂದರವಾಗಿರಲಿದೆ ಎಂದರು.
ಸದೃಢ ದೇಹಕ್ಕೆ ಸದೃಢ ಹೃದಯ ಮತ್ತು ಮನಸ್ಸು ಬೇಕು. ಆಲೋಚನೆಗಳ ಹತೋಟಿಯಿಂದ ದೇಹ ಮತ್ತು ಜೀವನವನ್ನು ಸುಸ್ಥಿತಿಯಲ್ಲಿ ಇರಿಸಬಹುದು. ಪೇಂಟಿಂಗ್, ಹಾಡು, ನೃತ್ಯ ಸೇರಿ ಉಲ್ಲಾಸಗೊಳಿಸುವ ಕೆಲಸಗಳಲ್ಲಿ ತೊಡಗಿ ನಗು ಕಾಪಾಡಿಕೊಳ್ಳಿ ಎಂದು ಹೇಳಿದರು.
ಹಿರಿಯ ಹೃದಯ ತಜ್ಞ ಡಾ.ಶಿವಲಿಂಗಪ್ಪ ಮಾತನಾಡಿ ರೋಗಿಯನ್ನು ಆಸ್ಪತ್ರೆಗೆ ತರುವ ಮುನ್ನ ಆತನಿರುವ ಸ್ಥಳಕ್ಕೆ ವೈದ್ಯಕೀಯ ತಂಡ ತೆರಳಿದರೆ ಅನುಕೂಲ. ಹೃದಯ ಚಿಕಿತ್ಸೆಗೆ ಪೂರಕವಾದ ಆಂಬುಲೆನ್ಸ್ ರೂಪಿಸಿದರೆ ಸಾವಿನ ಪ್ರಮಾಣ ತಗ್ಗಿಸಬಹುದು ಎಂದರು.
ಸಿಹಿ, ಮಾಂಸದೂಟ ಕಡಿಮೆ ಮಾಡಿ, ಹಣ್ಣು-ತರಕಾರಿಗಳನ್ನು ಹೆಚ್ಚು ಸೇವಿಸುವ ಅಭ್ಯಾಸ ಮಾಡಿಕೊಂಡಲ್ಲಿ ಹೃದಯದ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ಹೃದಯ ದೇಹದ ಮುಖ್ಯ ಅಂಗ. ಕರೋನಾ ಬಳಿಕ ಇಂದು ಹೃದ್ರೋಗ ಎಲ್ಲ ವಯೋಮಾನದವರಲ್ಲೂ ಕಾಡುತ್ತಿದೆ. ಹೃದಯವನ್ನು ಹೆಚ್ಚು ಪ್ರೀತಿಸಬೇಕು. ಏನನ್ನು ತಿನ್ನಬೇಕೆಂಬ ಬಗ್ಗೆ ಅರಿವು ಬೇಕು ಎಂದು ಹೇಳಿದರು.
ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುನೀಲ್ ಭಂಡಾರಕರ್ ಮಾತನಾಡಿ ವಿಶ್ವದಲ್ಲಿ ವರ್ಷಕ್ಕೆ 1.78 ಕೋಟಿ ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹೃದಯದ ಆರೋಗ್ಯ ರಕ್ಷಣೆಗೆ ಎಲ್ಲರಲ್ಲೂ ಕಾಳಜಿ ಅತಿ ಮುಖ್ಯ ಎಂದು ತಿಳಿಸಿದರು.  
ಹೃದ್ರೋಗ ತಜ್ಞ ವೈದ್ಯ ಡಾ. ಮಲ್ಲೇಶ್ ಮಾತನಾಡಿ ದೈನಂದಿನ ಜೀವನದಲ್ಲಿ ವ್ಯಾಯಾಮ, ಯೋಗ ಹಾಗೂ ಧ್ಯಾನ ರೂಢಿ ಸಿಕೊಳ್ಳಬೇಕು. ಒತ್ತಡ ನಿರ್ವಹಣೆ ತೀರಾ ಮುಖ್ಯವಾಗಿದೆ. ಹೃದಯಾಘಾತ ಸಂಭವಿಸಿದ ಮೊದಲ ಒಂದು ಗಂಟೆಯು ಗೋಲ್ಡನ್ ಹವರ್ ಆಗಿದ್ದು, ರೋಗಿಗೆ ಸಿಪಿಆರ್ ಚಿಕಿತ್ಸೆ ನೀಡಬೇಕೆಂದು ಸಲಹೆ ನೀಡಿದರು.
ಎಸ್‌ಎಸ್‌ಐಎಂಎಸ್ ಮತ್ತು ಆರ್‌ಸಿ ಒಪಿಡಿ ಕಾಂಪೌಂಡ್ ಆವರಣದಿಂದ ಆರಂಭಗೊಂಡ ವಾಕಥಾನ್, ಚಿಗಟೇರಿ ಆಸ್ಪತ್ರೆ ರಸ್ತೆ, ಪ್ರವಾಸಿಮಂದಿರ ರಸ್ತೆ, ಮಹಾತ್ಮ ಗಾಂಧಿ ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ಡಿಎಚ್‌ಒ ಡಾ.ಷಣ್ಮುಖಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗೇಂದ್ರಪ್ಪ, ಡಾ. ಲೋಹಿತಾಶ್ವ, ದೇವರಾಜ್, ವೈದ್ಯರು, ಯೋಗ ಒಕ್ಕೂಟ, ರೆಡ್‌ಕ್ರಾಸ್, ಲೈಫ್‌ಲೈನ್ ಸದಸ್ಯರು, ಶುಶ್ರೂಷಾ ಕಾಲೇಜು ವಿದ್ಯಾರ್ಥಿಗಳು ನಡಿಗೆಯಲ್ಲಿ ಭಾಗಿಯಾಗಿದ್ದರು.