ಜಿಲ್ಲೆ

ಶ್ರೀರಾಮನಂತೆ ಸನ್ಮಾರ್ಗದ ನಡೆಯಿರಲಿ

ಡಿ. ಎಂ. ಮಹೇಶ್

ದಾವಣಗೆರೆ: ಎಂಥಹ ಸಂದಿಗ್ಧ ಪರಿಸ್ಥಿತಿಯಲ್ಲೂ ಶ್ರೀರಾಮ ಧರ್ಮ-ಸತ್ಯದ ಮಾರ್ಗ ಬಿಡಲಿಲ್ಲ. ಅಂತೆಯೇ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ಸಾಗಬೇಕು. ಆಗ ಜೀವನದಲ್ಲಿ ಯಶಸ್ಸು ಸಿಗಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಗುಂಡಿ ಮಹದೇವಪ್ಪ ಕಲ್ಯಾಣಮಂಟಪದಲ್ಲಿ ಮಂಗಳವಾರ, ಜಿಲ್ಲಾಡಳಿತ, ಜಿಪಂ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ದುರಾಲೋಚನೆ ಕಡೆಗೆ ವಾಲಬಾರದು. ಜೀವನದಲ್ಲಿ ಆಶಾವಾದ, ಕಲ್ಮಶಮುಕ್ತ ಮನಸ್ಸು ಹೊಂದಬೇಕು ಎಂದು ತಿಳಿಸಿದರು.

ರಾಮಾಯಣದಲ್ಲಿ ಬರುವ ಪ್ರತಿಯೊಂದೂ ಪಾತ್ರಗಳನ್ನು ನಾವು ಅರ್ಥ ಮಾಡಿಕೊಂಡು ಆದರ್ಶ ಬದುಕು ನಡೆಸಲು ಸಹಕಾರಿಯಾಗಿವೆ. ಹಿರಿಯರಲ್ಲಿ ಗೌರವ, ಸಹೋದರದಲ್ಲಿ ಭಾತೃತ್ವ, ದಂಪತಿ ನಡುವೆ ಗೌರವ ಭಾವನೆ ಹಾಗೂ ಪ್ರಜೆಗಳಿಗೆ ಉತ್ತಮ ಆಡಳಿತ ನೀಡಬೇಕೆಂಬುದನ್ನು ರಾಮಾಯಣ ಕಲಿಸುತ್ತದೆ ಎಂದು ಹೇಳಿದರು.

ರಾಮಾಯಣ ಕೃತಿಯು ಭಾರತಕ್ಕೆ ಮಾತ್ರವೇ ಪ್ರೇರಿತವಾಗದೆ ವಿಶ್ವದೆಲ್ಲೆಡೆ ವಿಶ್ಲೇಷಣೆಗೆ ಕಾರಣವಾಗಿದೆ. ವಾಲ್ಮೀಕಿ ರಾಮಾಯಣದಿಂದ ಪ್ರೇರಣೆಗೊಂಡ ಕವಿ-ಸಾಹಿತಿಗಳು ಕೂಡ ರಾಮಾಯಣವನ್ನು ತಮ್ಮದೇ ಆದ ರೀತಿಯಲ್ಲಿ ಬದಲಾವಣೆ ಮಾಡಿದ್ದಾರೆ ಎಂದರು.

ಎಲ್ಲರ ಹೃದಯಮಂದಿರದಲ್ಲಿ ರಾಮಾಯಣ, ಶ್ರೀರಾಮನ ಆದರ್ಶಗಳು ಮನೆ ಮಾಡಿವೆ. ನಾವಿಂದು ಧರ್ಮದ ಹಾದಿಯಲ್ಲಿ ಸಾಗಿದಾಗ ರಾಮಾಯಣ ಹಾಗೂ ವಾಲ್ಮೀಕಿ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಆಗಲಿದೆ ಎಂದು ಹೇಳಿದರು.

410 ಕೋಟಿ ರೂ. ವಿದ್ಯಾರ್ಥಿವೇತನ, 161 ಕೋಟಿ ರೂ. ಪ್ರೋತ್ಸಾಹಧನ, ವಾಲ್ಮೀಕಿ ಭವನಗಳ ನಿರ್ಮಾಣಕ್ಕಾಗಿ 95 ಕೋಟಿ ರೂ. ಸೇರಿದಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆ ನೀಡಿದೆ. ಕೇಂದ್ರ ಸರ್ಕಾರದ ಆಭಾ ಧರ್ತಿ ಜನಜಾತೀಯ ಉತ್ಕರ್ಷ ಅಭಿಯಾನದಡಿ ಜಿಲ್ಲೆಯ 44 ಗ್ರಾಮಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದೂ ವಿವರ ನೀಡಿದರು.

ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ದಾದಾಪೀರ್ ನವಿಲೇಹಾಳ್, ಕವಿಗಳು ಈ ಯುಗದ ಎಲ್ಲ ಕಾಲದ ಅನಧಿಕೃತ ಶಾಸಕರಾಗಿದ್ದಾರೆ. ರಾಮಾಯಣವು ಜಗತ್ತಿನ ಏಳು ಮಹಾಕಾವ್ಯಗಳ ಪೈಕಿ ಒಂದಾಗಿದೆ. ಈ ಕೃತಿ ಮೂಲಕ ವಾಲ್ಮೀಕಿ ಅವರು ನೀಡಿದ ನೈತಿಕ ಮೌಲ್ಯಗಳು ಸದಾಕಾಲ ಜೀವಂತವಾಗಿವೆ. ಕೌಟುಂಬಿಕ ಮೌಲ್ಯ ಹೇಳುವ ರಾಮಾಯಣವನ್ನು ಅಧ್ಯಯನ ಮಾಡಬೇಕಿದೆ ಎಂದು ಹೇಳಿದರು.

ರಾಜಕಾರಣಿಗಳಿಗೆ ನೈತಿಕ ಕ್ಯಾನ್ವಾಸ್ ಅಗತ್ಯವಿದೆ. ರಾಜನ ಆಡಳಿತ ನೀತಿ, ಜನರಿಗೆ ಮಾದರಿಯಾಗುವ ಬಗ್ಗೆ ವಾಲ್ಮೀಕಿ ಕೃತಿಯ ಮೂಲಕ ರಾಜಕೀತ ದೃಷ್ಟಿಕೋನ ನೀಡಿದರು. ಅವರ ಕಾವ್ಯವನ್ನು ಬರದರೇ ಹೊರತು ಚರಿತ್ರೆಯನ್ನಲ್ಲ. ಹಾಗಾಗಿ ರಾಮಾಯಣವನ್ನು ಕಾವ್ಯವಾಗಿ ಓದಬೇಕು. ಇದನ್ನು ಚರಿತ್ರೆಯಾಗಿ ಓದಿದರೆ ಅಪಾಯವಿದೆ ಎಂದೂ ತಿಳಿಸಿದರು.

ಅರಮನೆಯಲ್ಲಿದ್ದೂ ವನವಾಸ ಸ್ಥಿತಿ ಅನುಭವಿಸಿದ ಊರ್ಮಿಳೆಯಂಥ ಸಣ್ಣ ಪಾತ್ರಗಳ ಬಗ್ಗೆಯೂ ವಾಲ್ಮೀಕಿ ಬೆಳಕು ಚೆಲ್ಲಿದ್ದಾರೆ. ರಾಮಾಯಣದಲ್ಲಿ ರಾಮನ ನಾಲಗೆ ನಿಷ್ಠೆ ಇದೆ. ಹೀಗಾಗಿ ಈ ಮಹಾಕಾವ್ಯವು ಸಂಶೋಧನಾ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ರಾಜಕೀಯ ಶಕ್ತಿ ಕೇಂದ್ರವಾಗಿಯೂ ಬದಲಾಗಿದೆ. ನಾವು ಸಾಂವಿಧಾನಿಕ ನೈತಿಕತೆಯೊಂದಿಗೆ ಬದುಕು ನಡೆಸಿದರೆ ಅದುವೇ ವಾಲ್ಮೀಕಿಗೆ ನೀಡಿದ ಗೌರವ ಆಗಲಿದೆ ಎಂದರು.

ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ ರಾಮಾಯಣದಲ್ಲಿ ಸಾಮರಸ್ಯ, ಸೌಹಾರ್ದಕ್ಕೆ ವಾಲ್ಮೀಕಿ ಪ್ರಥಮಾಧ್ಯಮತೆ ನೀಡಿದ್ದಾರೆ. ರಾಮಾಯಾಣದ ಸಂದೇಶ ಹಾಗೂ ವಾಲ್ಮೀಕಿ ಅವರು ನೀಡಿದ ಆದರ್ಶಗಳನ್ನು ನಾವಿಂದು ಪರಿಪಾಲನೆ ಮಾಡಬೇಕಿದೆ ಎಂದು ಹೇಳಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಇದೇ ವೇಳೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಟಿ.ಬಸವರಾಜ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಸ್ಪಿ ಉಮಾ ಪ್ರಶಾಂತ್, ಎಡಿಸಿ ಶಿವಕುಮಾರ ಶೀಲವಂತ್, ಎಸ್ಸಿ ಎಸ್ಟಿ ಕಲ್ಯಾಣಾಧಿಕಾರಿ ಡಾ. ನವೀನ್ ಎಸ್. ಮಠದ್, ದೂಡಾ ಆಯುಕ್ತ ಹುಲ್ಲುಮನಿ ತಿಮ್ಮಣ್ಣ, ಮುಖಂಡರಾದ ಅಣಜಿ ಅಂಜಿನಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್, ಗುಮ್ಮನೂರು ಮಲ್ಲಿಕಾರ್ಜುನ್, ವಿಜಯಲಕ್ಷ್ಮಿ, ಶ್ಯಾಗಲೆ ನರೇಶ್ ಇತರರಿದ್ದರು.

----