ಜಿಲ್ಲೆ

ವೈಚಾರಿಕ ಹಬ್ಬವಾಗಲಿ ವಾಲ್ಮೀಕಿ ಜಾತ್ರೆ   ಫೆ. 8, 9ರಂದು ಆಯೋಜನೆ

ಡಿ. ಎಂ. ಮಹೇಶ್

ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಎಲ್ಲರ ಸಹಕಾರದೊಂದಿಗೆ ಸಾಂಸ್ಕೃತಿಕ ಹಬ್ಬವಾಗಿ ಆಚರಿಸೋಣ ಎಂದು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಜಗಳೂರು ಪ್ರವಾಸಿ ಮಂದಿರದಲ್ಲಿ ಭಾನುವಾರ ವಾಲ್ಮೀಕಿ ಜಾತ್ರೆ ಹಿನ್ನೆಲೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶ್ರೀಮಠದ 26ನೇ ವಾರ್ಷಿಕೋತ್ಸವ, ಲಿಂ.ಜಗದ್ಗುರು ಪುಣ್ಯಾನಂದಪುರಿ ಸ್ವಾಮೀಜಿಯವರ 17ನೇ ವರ್ಷದ ಪುಣ್ಯಾರಾಧನೆ ಹಾಗೂ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಸಮಾರಂಭ ನಡೆಯಲಿದ್ದು, ಸಮಾಜದವರು ಭಾಗವಹಿಸಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಒಕ್ಕಲಿಗ, ಲಿಂಗಾಯತ ಸೇರಿ ಸಹೋದರ ಸಮುದಾಯಗಳ ಒಗ್ಗಟ್ಟು, ಸ್ವಾಭಿಮಾನ, ಶೋಷಿತ ವರ್ಗಗಳಿಗೆ ಮಾದರಿಯಾಗಬೇಕು. ಅಂಬೇಡ್ಕರ್ ಅವರು ಕಲ್ಪಿಸಿದ ಸಂವಿಧಾನಬದ್ಧ ಹಕ್ಕುಗಳಿಗೆ ಸಂಘಟಿತ ಹೋರಾಟ ಅನಿವಾರ್ಯವಾಗಿದೆ. ಆದ್ದರಿಂದ ವಾಲ್ಮೀಕಿ ಜಾತ್ರೆಯನ್ನು ಸಾಂಸ್ಕೃತಿಕ ಹಬ್ಬವನ್ನಾಗಿಸಿ ವೈಚಾರಿಕ, ಜನಜಾಗೃತಿ ಮೂಡಿಸಬೇಕು ಎಂದರು.
ರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಾಯಕ ಸಮಾಜ, ಜಾತ್ರೆ ಆಚರಣೆ ಮೂಲಕ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಭಕ್ತರಲ್ಲಿ ಮನವಿ ಮಾಡಿದರು.
ಎಸ್‌ಟಿ ಮೀಸಲು ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವವರಿಗೆ ಕಡಿವಾಣ ಹಾಕುವುದು, ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಸೇರಿ ವಿವಿಧ ಬೇಡಿಕೆಗಳನ್ನು ಅಧಿವೇಶನದಲ್ಲಿ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ರಾಜನಹಳ್ಳಿಯಿಂದ ಬೆಂಗಳೂರು ವಿಧಾನಸೌಧದವರೆಗೆ ನಡೆಸಿದ ಪಾದಯಾತ್ರೆ, ಅನಿರ್ದಿಷ್ಟಾವಧಿಯ  ಧರಣಿಗೆ ರಾಜ್ಯದಲ್ಲಿನ ನಾಯಕ ಸಮುದಾಯದವರ ವ್ಯಾಪಕ ಬೆಂಬಲದಿಂದಾಗಿ ಎಸ್‌ಟಿ ಸಮುದಾಯಕ್ಕೆ ಶೇ.7 ರಷ್ಟು ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರ ಹಾಗೂ ಸರ್ಕಾರಿ ನೌಕರರ ಮುಂಬಡ್ತಿಯಲ್ಲಿ ಮೀಸಲಾತಿ ಲಭಿಸಿದೆ. ಇದರಿಂದ ಸಮುದಾಯ ಮುನ್ನಲೆಗೆ ಬರುತ್ತಿದೆ ಎಂದು ತಿಳಿಸಿದರು.
ಜಾತ್ರೆ ಆಚರಣೆ ಸಂಬಂಧ ಶೀಘ್ರವೇ ಮತ್ತೊಂದು ಸಭೆ ನಡೆಸಲಾಗುವುದು. ಸಮಾಜದ ಜನಪ್ರತಿನಿಧಿಗಳು, ಮುಖಂಡರನ್ನು ಆಹ್ವಾನಿಸಿ ರೂಪುರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಕೆಪಿ ಪಾಲಯ್ಯ ಮಾತನಾಡಿ, ಶ್ರೀಗಳ ಹೋರಾಟ, ಸಮುದಾಯದ ಬಗ್ಗೆ ಹೊಂದಿರುವ ಕಾಳಜಿ ಅಪಾರ. ಸಮುದಾಯದವರು ಕೈಜೋಡಿಸಿ ಯಸ್ಸಿಗೆ ಕಾರಣಿಕರ್ತರಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ವಾಲ್ಮೀಕಿ ಜಾತ್ರೆಯ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ನಾಯಕ ಸಮಾಜದ ತಾಲೂಕಾಧ್ಯಕ್ಷ ಬಡಯ್ಯ, ಕಾರ್ಯದರ್ಶಿ ವಕೀಲ ತಿಪ್ಪೇಸ್ವಾಮಿ, ವಕೀಲರ ಸಂಘದ ತಾಲೂಕಾಧ್ಯಕ್ಷ ಮರೇನಹಳ್ಳಿ ಬಸವರಾಜ್, ಮುಖಂಡರಾದ ಬಿ. ಲೋಕೇಶ್, ಬಿಸ್ತುವಳ್ಳಿ ಬಾಬು, ರೇವಣ್ಣ, ತಿಮ್ಮಣ್ಣ, ನಿಜಲಿಂಗಪ್ಪ, ಸಿದ್ದಪ್ಪ, ನಾಗರಾಜ್, ಸಾವಿತ್ರಮ್ಮ, ಮಲ್ಲಿಕಾರ್ಜುನ್, ಪಾಪಲಿಂಗಪ್ಪ, ಗುರುರಾಜ್, ಪಾತಲಿಂಗಪ್ಪ, ಓಬಳೇಶ್, ಕೃಷ್ಣಪ್ಪ ಇತರರಿದ್ದರು.  
---
ಕೋಟ್
ಜಗಳೂರು ಕ್ಷೇತ್ರದಲ್ಲಿ ಬಡತನವಿದ್ದರೂ ಸಾಧ್ಯವಿರುವಷ್ಟು ದೇಣಿಗೆಯೊಂದಿಗೆ ಜಾತ್ರೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಹೃದಯ ಶ್ರೀಮಂತಿಕೆ ಭಕ್ತರಲ್ಲಿದೆ. ವಾಲ್ಮೀಕಿ ಜಾತ್ರೆ ತರಳಬಾಳು ಹುಣ್ಣಿಮೆಯಂತೆಯೇ ಮಾದರಿ ಕಾರ್ಯಕ್ರಮ ಆಗಬೇಕು.
ಎಸ್.ವಿ.ರಾಮಚಂದ್ರ
ಮಾಜಿ ಶಾಸಕ.