ಜಿಲ್ಲೆ

ಅನ್‌ಲಾಕ್ ರಾಘವ ಚಿತ್ರ 7ರಂದು ತೆರೆಗೆ

ಡಿ. ಎಂ. ಮಹೇಶ್

ದಾವಣಗೆರೆ: ಚನ್ನಗಿರಿ ಮೂಲದ ಮಿಲಿಂದ್ ಗೌತಮ್ ಅವರು ಚೊಚ್ಚಲ ಬಾರಿಗೆ ನಾಯಕನಟನಾಗಿ ಅಭಿನಯಿಸಿರುವ ಅನ್‌ಲಾಕ್ ರಾಘವ ಚಿತ್ರ ಫೆ. 7ರಂದು ರಾಜ್ಯದ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಐಫ್ಲೆಕ್ಸ್‌ನ ಪ್ರತಿನಿಧಿ ಅವಿನಾಶ್ ತಿಳಿಸಿದರು.
ಮಯೂರ ಮೋಷನ್ ಪಿಕ್ಚರ್ಸ್, ಐಫ್ಲೆಕ್ಸ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗಿದ್ದು ಡಿ. ಸತ್ಯಪ್ರಕಾಶ್ ಕತೆ, ಚಿತ್ರಕಥೆ ಬರೆದಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದು, ಅನೂಪ್ ಸೀಳಿನ್ ಚಿತ್ರ ಸಂಗೀತ ಒದಗಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಲವ್ ಮಾಕ್ಟೇಲ್ 2 ಖ್ಯಾತಿಯ ರೇಚಲ್ ಡೇವಿಡ್ ನಾಯಕನಟಿಯಾಗಿ ಅಭಿನಯಿಸಿದ್ದಾರೆ. ಶೋಭರಾಜ್, ಅವಿನಾಶ್, ರಮೇಶ್‌ಭಟ್, ವೀಣಾ ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿಶೆಟ್ಟಿ ತಾರಾಗಣದಲ್ಲಿದ್ದಾರೆ. ಸಾಧು ಕೋಕಿಲಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.
ಚಿತ್ರದ ನಾಯಕ ಯಾವುದೇ ಬೀಗಗಳನ್ನು ಅನ್‌ಲಾಕ್ ಮಾಡುವ ವಿಶೇಷತೆ ಹೊಂದಿದ್ದು, ಜೀವನದ ಪಯಣದಲ್ಲಿ ಸ್ವತಃ ಲಾಕ್ ಆದಾಗ ಅದರಿಂದ ಹೇಗೆ ಹೊರಬರುತ್ತಾನೆ ಎಂಬುದೇ ಚಿತ್ರದ ಕಥಾವಸ್ತುವಾಗಿದೆ. ಮೂರು ಹಾಡುಗಳನ್ನು ಹೃದಯಶಿವ, ಪ್ರಮೋದ್ ಮರವಂತೆ, ವಾಸುಕಿ ವೈಭವ್ ಬರೆದಿದ್ದು, ಸಾಯಿ ವ್ನಿೇಶ್, ವಿಜಯಪ್ರಕಾಶ್, ಅಂಕಿತಾ ಕುಂಡು ಹಾಡಿದ್ದಾರೆ ಎಂದು ಹೇಳಿದರು.
ನಾಯಕನಟ ಮಿಲಿಂದ್ ಗೌತಮ್ ಮಾತನಾಡಿ ನಾನು ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದೇನೆ. ಇದು ನಾಯಕನಟನಾಗಿ ನನ್ನ ಮೊದಲ ಸಿನಿಮಾ. ಕಥೆಗೆ ತಕ್ಕಂತೆ ಚಿತ್ರದುರ್ಗದಲ್ಲಿ ಹೆಚ್ಚಿನ ಚಿತ್ರೀಕರಣ ನಡೆಸಲಾಗಿದೆ. ಇದೊಂದು ಪಕ್ಕಾ ಮನರಂಜನೆಯ ಚಿತ್ರವಾಗಿದೆ. ಯಾರಿಗೋ ಬುದ್ದಿವಾದ ಹೇಳುವ ಚಿತ್ರ ಇದಲ್ಲ ಎಂದರು.
ಈ ಚಿತ್ರ ನಟ ಉಪೇಂದ್ರ ಅವರಿಗೆಂದೇ ಬರೆದ ಚಿತ್ರಕಥೆ. ಆದರೆ ಅವರು ಈ ಪ್ರಾಜೆಕ್ಟ್‌ಗೆ ಬರುವುದು ತಡವಾದ್ದರಿಂದ ನನಗೆ ಅವಕಾಶ ಸಿಕ್ಕಿದೆ. 6 ಕೋಟಿ ರೂ. ಗೂ ಹೆಚ್ಚಿನ ಬಜೆಟ್ ವ್ಯಯಿಸಲಾಗಿದೆ. ಚಿತ್ರದ ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಜನರು ಸಿನಿಮಾಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸುನಿಲ್ ಮಾನೆ, ಕೆ. ಹೇಮಂತ್‌ಕುಮಾರ್ ಇದ್ದರು.
---